ಇಂಡಿಗೋ ವಿಮಾನದ ಕ್ಯಾಬಿನ್ ನಲ್ಲಿ ಹೊಗೆ; ಕೈ ಕೊಟ್ಟ ವಿಸ್ತಾರಾ ವಿಮಾನ ಎಂಜಿನ್, ತಪ್ಪಿದ ದುರಂತ

ಇತ್ತೀಚಿಗೆ ವಿಮಾನಗಳಲ್ಲಿ ತಾಂತ್ರಿಕ ದೋಷಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ. ರಾಯ್‌ಪುರ-ಇಂದೋರ್ ಇಂಡಿಗೋ ವಿಮಾನ ಮಂಗಳವಾರ ಲ್ಯಾಂಡ್ ಆದ ನಂತರ ಕ್ಯಾಬಿನ್‌ನಲ್ಲಿ ಹೊಗೆ...
ಇಂಡಿಗೋ ವಿಮಾನ
ಇಂಡಿಗೋ ವಿಮಾನ

ನವದೆಹಲಿ: ಇತ್ತೀಚಿಗೆ ವಿಮಾನಗಳಲ್ಲಿ ತಾಂತ್ರಿಕ ದೋಷಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ. ರಾಯ್‌ಪುರ-ಇಂದೋರ್ ಇಂಡಿಗೋ ವಿಮಾನ ಮಂಗಳವಾರ ಲ್ಯಾಂಡ್ ಆದ ನಂತರ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ ಎಂದು ವಿಮಾನಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ ಬುಧವಾರ ತಿಳಿಸಿದೆ.

ಎ320 ವಿಮಾನ ಇಂದೋರ್ ನಲ್ಲಿ ಲ್ಯಾಂಡ್ ಆದ ನಂತರ ಕ್ಯಾಬಿನ್ ಸಿಬ್ಬಂದಿ ಕ್ಯಾಬಿನ್‌ನಲ್ಲಿ ಹೊಗೆಯನ್ನು ಗಮನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಇಳಿಸಲಾಯಿತು ಎಂದಿದೆ. ಈ ಘಟನೆಯ ಕುರಿತು ಡಿಜಿಸಿಎ ತನಿಖೆ ನಡೆಸುತ್ತಿದೆ.

ಕಳೆದ ಮೂರು ವಾರಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿದಂತೆ ಪದೇ ಪದೇ ಅವಘಡಗಳು ಘಟಿಸುತ್ತಲೇ ಇರುವ ಮತ್ತೊಂದು ವಿಮಾನಯಾನ ಸಂಸ್ಥೆಯಾದ ಸ್ಪೈಸ್‌ಜೆಟ್‌ಗೆ ನೋಟಿಸ್ ಕಳುಹಿಸಿದ ದಿನದಂದೇ (ಜುಲೈ 5 ) ಈ ಘಟನೆ ನಡೆದಿದೆ.

ಕೈ ಕೊಟ್ಟ ವಿಸ್ತಾರಾ ವಿಮಾನ ಎಂಜಿನ್; ತಪ್ಪಿದ ದುರಂತ
ಈ ಮಧ್ಯೆ, ಮಂಗಳವಾರ ಬ್ಯಾಂಕಾಕ್‌ನಿಂದ ದೆಹಲಿಗೆ ಬಂದಿಳಿದ ಬಳಿಕ ವಿಸ್ತಾರಾ ವಿಮಾನದ ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ನಂತರ ಇಂಜಿನ್‌ಗಳಲ್ಲಿ ಒಂದು ಸಣ್ಣ ವಿದ್ಯುತ್ ದೋಷ ಕಾಣಿಸಿಕೊಂಡಿತು ಎಂದು ಏರ್‌ಲೈನ್ಸ್ ತಿಳಿಸಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದಿದೆ.

ಬ್ಯಾಂಕಾಕ್-ದೆಹಲಿ ವಿಮಾನ ಯುಕೆ-122 ನಿನ್ನೆ ಜುಲೈ 5 ರಂದು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಈ ಘಟನೆ ಸಂಭವಿಸಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ವಿಮಾನವನ್ನು ಟ್ಯಾಕ್ಸಿವೇಯಿಂದ ಪಾರ್ಕಿಂಗ್ ಪ್ರದೇಶಕ್ಕೆ ಎಳೆದುಕೊಂಡು ಹೋಗಬೇಕಾಯಿತು.

ರನ್‌ವೇಯನ್ನು ಖಾಲಿ ಮಾಡಿದ ನಂತರ ಪೈಲಟ್‌ಗಳು ಇಂಜಿನ್ ಸಂಖ್ಯೆ 1 ಬಳಸಿ ಸಿಂಗಲ್ ಇಂಜಿನ್ ಟ್ಯಾಕ್ಸಿ ಮಾಡಲು ಬಯಸಿದ್ದರಿಂದ ವಿಮಾನದ ಎಂಜಿನ್ ಸಂಖ್ಯೆ 2 ಅನ್ನು ಸ್ಥಗಿತಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಟ್ಯಾಕ್ಸಿವೇಯ ಕೊನೆಯಲ್ಲಿ ಎಂಜಿನ್ ಸಂಖ್ಯೆ 1 ವಿಫಲವಾದ ಕಾರಣ ವಿಮಾನವನ್ನು ಪಾರ್ಕಿಂಗ್ ಪ್ರದೇಶಕ್ಕೆ ತೆಗೆದುಕೊಂಡು ಹೋಗಲಾಯಿತು ಎಂದು ವಿಸ್ತಾರಾ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com