ಹುಬ್ಬಳ್ಳಿ-ವಾಸ್ಕೋ ಡ ಗಾಮ ರೈಲಿನಲ್ಲಿ ವಿಸ್ಟಾಡೋಮ್ ಕೋಚ್: ಕೇಂದ್ರ ಸಚಿವರನ್ನೂ ಬಿಡಲಿಲ್ಲ ಸುಳ್ಳು ಸುದ್ದಿ ಖೆಡ್ಡಾ!

ಹುಬ್ಬಳ್ಳಿ-ವಾಸ್ಕೋ ಡಾ ಗಾಮ ರೈಲು ವಿಸ್ಟಾಡೋಮ್ ಕೋಚ್ ನೊಂದಿಗೆ ಜು.16 ರಿಂದ ಕಾರ್ಯನಿರ್ವಹಿಸಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು ಸುದ್ದಿ ಎಂದು ನೈಋತ್ಯ ರೈಲ್ವೆ (ಎಸ್ ಡಬ್ಲ್ಯುಆರ್) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಕಲಿ ಪತ್ರಿಕಾ ಹೇಳಿಕೆಯ ಚಿತ್ರ
ನಕಲಿ ಪತ್ರಿಕಾ ಹೇಳಿಕೆಯ ಚಿತ್ರ

ಹುಬ್ಬಳ್ಳಿ: ಹುಬ್ಬಳ್ಳಿ-ವಾಸ್ಕೋ ಡಾ ಗಾಮ ರೈಲು ವಿಸ್ಟಾಡೋಮ್ ಕೋಚ್ ನೊಂದಿಗೆ ಜು.16 ರಿಂದ ಕಾರ್ಯನಿರ್ವಹಿಸಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು ಸುದ್ದಿ ಎಂದು ನೈಋತ್ಯ ರೈಲ್ವೆ (ಎಸ್ ಡಬ್ಲ್ಯುಆರ್) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಸ್ಟಾಡೋಮ್ ನೊಂದಿಗಿನ ರೈಲು ಸಂಚಾರದ ಘೋಷಣೆಯ ಸುದ್ದಿ ಸುಳ್ಳು, ಅಧಿಕೃತವಲ್ಲದ ಈ ಸುದ್ದಿಯನ್ನು ಹರಡಿ ಜನತೆಯನ್ನು ದಾರಿತಪ್ಪಿಸಲಾಗುತ್ತಿದೆ ಎಂದು ಎಸ್ ಡಬ್ಲ್ಯುಆರ್ ಹೇಳಿದೆ.
 
ಈ ಸುಳ್ಳು ಸುದ್ದಿ ಖೆಡ್ಡಾಗೆ ಸ್ವತಃ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಬಿದ್ದಿದ್ದರು ಎಂಬುದು ಮತ್ತೊಂದು ಅಚ್ಚರಿಯ ಸಂಗತಿ. ಟ್ವಿಟರ್ ಖಾತೆಯ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದ ಪ್ರಹ್ಲಾದ್ ಜೋಷಿ ಹುಬ್ಬಳ್ಳಿ-ವಾಸ್ಕೋ ಡ ಗಾಮ ರೈಲು ಸಂಚರಿಸುವ ಮಾರ್ಗದ ಪ್ರಯಾಣಿಕರು ವಿಸ್ಟಾಡೋಮ್ ಕೋಚ್ ಮೂಲಕ ಪ್ರಕೃತಿಯ ಸೌಂದರ್ಯವನ್ನು ಆನಂದಿಸಬಹುದು ಎಂದು ಹೇಳಿದ್ದರು. ಅವರ ಟ್ವೀಟ್ ಗಳನ್ನು ಹಲವು ಮಂದಿ ಹಂಚಿಕೊಂಡಿದರು. ಆದರೆ ಇದು ನಕಲಿ, ಸುಳ್ಳು ಸುದ್ದಿ ಎಂಡು ತಿಳಿದ ತಕ್ಷಣವೇ ಜೋಷಿ ಟ್ವೀಟ್ ಖಾತೆಯಿಂದ ಟ್ವೀಟ್ ನ್ನು ಡಿಲೀಟ್ ಮಾಡಲಾಗಿದೆ. 

ಅನಾಮಿಕ ದುಷ್ಕರ್ಮಿಗಳು ವಿಸ್ಟಾಡೋಮ್ ಬಗ್ಗೆ ಎಸ್ ಡಬ್ಲ್ಯುಆರ್ ಪತ್ರಿಕಾ ಹೇಳಿಕೆಯ ರೀತಿಯಲ್ಲೇ ನಕಲಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. 

ನಕಲಿ ಸುದ್ದಿಯನ್ನೇ ನೈಜ ಸುದ್ದಿ ಎಂದು ಭಾವಿಸಿದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ನಗರದ ಮಂದಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಆದರೆ ಸುಳ್ಳು ಸುದ್ದಿ ಎಂದು ತಿಳಿದ ಬಳಿಕ ನಿರಾಶೆಗೊಂಡಿದ್ದಾರೆ. 

ಈ ಹೊಸ ರೈಲಿನಲ್ಲಿ ವಿಸ್ಟಾಡೋಮ್ ಕೋಚ್ ಅಳವಡಿಕೆಯ ಬಗ್ಗೆ ಸ್ವತಃ ಎಸ್ ಡಬ್ಲ್ಯುಆರ್ ಅಧಿಕಾರಿಗಳಿಗೇ ಮಾಹಿತಿ ಇರಲಿಲ್ಲ. ಆದರೆ ನಕಲಿ ಪತ್ರಿಕಾ ಹೇಳಿಕೆ ನೋಡಿ ಅಧಿಕಾರಿಗಳು ಅಚ್ಚರಿಪಟ್ಟಿದ್ದರು. ಹಿರಿಯ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಇದು ನಕಲಿ ಎಂಬುದು ಸ್ಪಷ್ಟವಾಗಿದೆ. 

ದೂದ್ ಸಾಗರ್ ಜಲಪಾತದ ಸೌಂದರ್ಯವನ್ನು ಆನಂದಿಸುವುದಕ್ಕಾಗಿ ಆ ಪ್ರದೇಶದ ರೈಲು ಮಾರ್ಗದಲ್ಲಿ ಎಸ್ ಡಬ್ಲ್ಯುಆರ್ ವಿಸ್ಟಾಡೋಮ್ ಕೋಚ್ ಅಳವಡಿಕೆ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂಬ ಸುದ್ದಿ ಇತ್ತೀಚೆಗೆ ಪ್ರಕಟವಾಗಿತ್ತು. ಈ ಬೆನ್ನಲ್ಲೇ ರೈಲಿನಲ್ಲಿ ಕೋಚ್ ಅಳವಡಿಸಲಾಗಿದೆ ಎಂಬ ನಕಲಿ ಸುದ್ದಿ ಹರಡುತ್ತಿದೆ. ನಕಲಿ ಸುದ್ದಿಯನ್ನು ಹರಡಿದವರ ಮೂಲವನ್ನು ಪತ್ತೆ ಮಾಡುವುದಕ್ಕಾಗಿ ಎಸ್ ಡಬ್ಲ್ಯುಆರ್ ತನಿಖೆ ಪ್ರಾರಂಭಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com