'ಅಗ್ನಿಪಥ' ವಿವಾದ: ನೇಮಕಾತಿ ಯೋಜನೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ದೆಹಲಿ ಹೈಕೋರ್ಟ್ ಗೆ ವರ್ಗಾಯಿಸಿದೆ. ಅಲ್ಲದೆ ಈ ಕುರಿತ ವಿಚಾರಣೆಯನ್ನು ಸಂಪೂರ್ಣವಾಗಿ ದೆಹಲಿ ಹೈಕೋರ್ಟ್ ಗೆ ವರ್ಗಾಯಿಸುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿದೆ.
ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ, ಅಗ್ನಿಪಥ್ ಯೋಜನೆಯನ್ನು ಪ್ರಶ್ನಿಸಿ ಯಾವ್ಯಾವ ಹೈಕೋರ್ಟ್ ಗಳಲ್ಲಿ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಎಂಬುದನ್ನು ದಾಖಲಿಸಿದರು. ಕೇರಳ, ಪಾಟ್ನಾ, ದೆಹಲಿ, ಪಂಜಾಬ್, ಹರ್ಯಾಣ, ಉತ್ತರಾಖಂಡ್, ಕೊಚ್ಚಿಯ ಸಶಸ್ತ್ರ ನ್ಯಾಯಮಂಡಳಿಗಳಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ.
ಸುಪ್ರೀಂ ಕೋರ್ಟ್ ಇಂದು ಎಲ್ಲಾ ಉಳಿಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಒಗ್ಗೂಡಿಸಿ ತ್ವರಿತ ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್ ಗೆ ವರ್ಗಾಯಿಸಿತು.
ಹೈಕೋರ್ಟ್ ಗಳ ಅಭಿಪ್ರಾಯಗಳನ್ನು ನಾವು ಪರಿಗಣಿಸಬೇಕಾಗಿತ್ತು. ಸಂವಿಧಾನದ 226ನೇ ವಿಧಿಯಡಿ ಹೈಕೋರ್ಟ್ ನ ನ್ಯಾಯವ್ಯಾಪ್ತಿಯ ಮಹತ್ವವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದ ನ್ಯಾಯಮೂರ್ತಿ ಚಂದ್ರಚೂಡ್, ಹೈಕೋರ್ಟ್ ನ ಅಭಿಪ್ರಾಯವನ್ನು ಪಡೆಯೋಣ. ಹೈಕೋರ್ಟ್ ನ ದೃಷ್ಟಿಕೋನವೇನಿದೆ ಎಂಬುದನ್ನು ನೋಡೋಣ. ಹೈಕೋರ್ಟ್ ನ ದೃಷ್ಟಿಕೋನವನ್ನು ಪಡೆಯುವುದು ಉತ್ತಮ ಎಂದರು.
ಜಾತಿ, ಧರ್ಮ ಪ್ರಮಾಣ ಪತ್ರ ಅಗತ್ಯ: ಸೇನಾಧಿಕಾರಿಗಳು
ಈ ಮಧ್ಯೆ, ಅಗ್ನಿವೀರ್ ಯೋಜನೆಗೆ ಜಾತಿ ಮತ್ತು ಧರ್ಮದ ಪ್ರಮಾಣಪತ್ರಗಳನ್ನು ಕೇಳಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಯಾಗಿ, ಹಲವಾರು ಸಶಸ್ತ್ರ ಪಡೆಗಳ ಅಧಿಕಾರಿಗಳು ಅಂತಹ ಪ್ರಮಾಣಪತ್ರಗಳ ಅವಶ್ಯಕತೆಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಯಾವಾಗಲೂ ಇರುತ್ತವೆ ಎಂದು ಹೇಳಿದ್ದಾರೆ.
ಆಕಾಂಕ್ಷಿಗಳು ಜಾತಿ ಪ್ರಮಾಣ ಪತ್ರ ಮತ್ತು ಅಗತ್ಯವಿದ್ದಲ್ಲಿ ಧರ್ಮ ಪ್ರಮಾಣ ಪತ್ರ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಅಗ್ನಿವೀರ ನೇಮಕಾತಿ ಯೋಜನೆಗೆ ಯಾವುದೇ ಬದಲಾವಣೆ ಇಲ್ಲ, ತರಬೇತಿ ವೇಳೆ ಮೃತಪಡುವ ಸೈನಿಕರು ಮತ್ತು ಸೈನಿಕರಿಗೆ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಅಂತಿಮ ಸಂಸ್ಕಾರ ಮಾಡಲು ಧರ್ಮ ಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ