ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿ ಆಯ್ಕೆ; ಪ್ರತಿಪಕ್ಷ ಶಾಸಕರ ಅಡ್ಡ ಮತದಾನದಿಂದ ಗೆಲುವಿನ ಹಾದಿ ಸುಗಮ!
ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾಗೆ ತಮ್ಮ ಪಕ್ಷಗಳ ಬೆಂಬಲ ಘೋಷಣೆಯನ್ನು ಧಿಕ್ಕರಿಸಿ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಸಾಕಷ್ಟು ಸಂಖ್ಯೆಯ ಶಾಸಕರು ಬೆಂಬಲಿಸಿ ಅಡ್ಡ ಮತದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
Published: 22nd July 2022 12:04 PM | Last Updated: 22nd July 2022 02:36 PM | A+A A-

ದ್ರೌಪದಿ ಮುರ್ಮು
ನವದೆಹಲಿ: ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾಗೆ (Yashwanth Sinha) ತಮ್ಮ ಪಕ್ಷಗಳ ಬೆಂಬಲ ಘೋಷಣೆಯನ್ನು ಧಿಕ್ಕರಿಸಿ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಸಾಕಷ್ಟು ಸಂಖ್ಯೆಯ ಶಾಸಕರು ಬೆಂಬಲಿಸಿ ಅಡ್ಡ ಮತದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ವಿವಿಧ ರಾಜ್ಯಗಳ ವಿಧಾನಸಭೆಗಳ ಸುಮಾರು 125 ಶಾಸಕರು ಅಡ್ಡ ಮತದಾನ ಮಾಡುವ ಮೂಲಕ ರಾಷ್ಟ್ರಪತಿಯಾಗಿ ಆಯ್ಕೆಯಾಗಲು ದ್ರೌಪತಿ ಮುರ್ಮು (Draupadi Murmu) ಅವರ ಗೆಲುವಿನ ಹಾದಿ ಸುಗಮವಾಯಿತು.
ಪ್ರತಿಪಕ್ಷಗಳ 17 ಸಂಸದರು ಅಡ್ಡಮತದಾನ ಮಾಡಿದರೆ, ಅಸ್ಸಾಂ, ಜಾರ್ಖಂಡ್ ಮತ್ತು ಮಧ್ಯಪ್ರದೇಶ ವಿಧಾನಸಭೆಗಳು ಗಮನಾರ್ಹ ಸಂಖ್ಯೆಯ ವಿರೋಧ ಪಕ್ಷದ ಶಾಸಕರು ಬಿಜೆಪಿ ನೇತೃತ್ವದ ಎನ್ ಡಿಎ ಅಭ್ಯರ್ಥಿಯಾಗಿದ್ದ ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದ್ದಾರೆ. ಅಸ್ಸಾಂನಲ್ಲಿ 22, ಮಧ್ಯಪ್ರದೇಶದಲ್ಲಿ 20 ಶಾಸಕರು ಅಡ್ಡ ಮತದಾನ ಮಾಡಿರುವ ಸಾಧ್ಯತೆಯಿದೆ.
ಬಿಹಾರ ಮತ್ತು ಛತ್ತೀಸ್‌ಗಢದಿಂದ ತಲಾ ಆರು, ಗೋವಾದಿಂದ ನಾಲ್ವರು ಮತ್ತು ಗುಜರಾತ್‌ನ 10 ಪ್ರತಿಪಕ್ಷಗಳ ಶಾಸಕರು ಕೂಡ ಮುರ್ಮುಗೆ ಮತ ಹಾಕಿರಬಹುದು.ಮುರ್ಮು ಅವರಿಗೆ ಬುಡಕಟ್ಟು ಹಿನ್ನೆಲೆಯು ಜಾರ್ಖಂಡ್‌ನ ವಿರೋಧ ಪಕ್ಷದ ಶಾಸಕರಿಂದಲೂ ಬೆಂಬಲ ಸಿಕ್ಕಿದೆ, ಅಲ್ಲಿ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಮೊದಲೇ ಅವರಿಗೆ ಬೆಂಬಲ ಘೋಷಿಸಿತ್ತು.
ಇದನ್ನೂ ಓದಿ: 'ದ್ರೌಪದಿ ಮುರ್ಮು' ಭಾರತಕ್ಕೆ ಸಿಕ್ಕ ಅತ್ಯಂತ ಕಿರಿಯ ಹಾಗೂ ಸ್ವಾತಂತ್ರ್ಯ ನಂತರ ಜನಿಸಿದ ಮೊದಲ ರಾಷ್ಟ್ರಪತಿ!
ಭಾರತದ ಮೊದಲ ಬುಡಕಟ್ಟು ಜನಾಂಗದ ಮತ್ತು ಇದುವರೆಗೆ ರಾಷ್ಟ್ರಪತಿಯಾದವರಲ್ಲಿ ಅತಿ ಕಿರಿ ವಯಸ್ಸಿನ ರಾಷ್ಟ್ರಪತಿಯಾಗಿ ಮುರ್ಮು ಅವರು ಆಯ್ಕೆಯಾಗಿದ್ದಾರೆ.
ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಅಸೆಂಬ್ಲಿಗಳಿಂದ ಗರಿಷ್ಠ ಮತಗಳನ್ನು ಪಡೆದರೆ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಿಂದ ಹೆಚ್ಚಿನ ಬೆಂಬಲವನ್ನು ಪಡೆದರು.
ಆಂಧ್ರಪ್ರದೇಶದ ಎಲ್ಲಾ ಶಾಸಕರು, ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಟಿಡಿಪಿ ಮುರ್ಮು ಅವರಿಗೆ ಬೆಂಬಲ ನೀಡುವುದಾಗಿ ವಾಗ್ದಾನ ಮಾಡಿದ್ದರು. ಅದರಂತೆ ಮುರ್ಮು ಅವರಿಗೆ ಮತ ಹಾಕಿದರು. ಮತ್ತೊಂದೆಡೆ ಕೇರಳದಲ್ಲಿ ಆಡಳಿತಾರೂಢ ಎಡಪಕ್ಷ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಎರಡೂ ಸಿನ್ಹ ಅವರಿಗೆ ಬೆಂಬಲ ನೀಡಿತ್ತು.
ಇದನ್ನೂ ಓದಿ: ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ, ಈ ಹುದ್ದೆಗೇರಿದ ಮೊದಲ ಬುಡಕಟ್ಟು ಮಹಿಳೆ!
ಮುರ್ಮು ಸಿಕ್ಕಿಂ ಮತ್ತು ನಾಗಾಲ್ಯಾಂಡ್ ವಿಧಾನಸಭೆಗಳಿಂದ ಎಲ್ಲಾ ಮತಗಳನ್ನು ಪಡೆದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಟ್ವೀಟ್ ಮೂಲಕ ಅಲ್ಲಿನ ವಿರೋಧ ಪಕ್ಷದ ಶಾಸಕರಿಂದ ಅಡ್ಡ ಮತದಾನದ ಬಗ್ಗೆ ಸೂಚನೆ ನೀಡಿದ್ದರು. 126 ಸದಸ್ಯ ಬಲ ಹೊಂದಿರುವ ಅಸ್ಸಾಂ ವಿಧಾನಸಭೆಯಲ್ಲಿ ದ್ರೌಪದಿ ಮುರ್ಮು 104 ಮತಗಳನ್ನು ಪಡೆದಿದ್ದಾರೆ, ಅಸ್ಸಾಂ ಅಸೆಂಬ್ಲಿಯಲ್ಲಿ ಎನ್‌ಡಿಎ ಮೂಲ ಬಲ 79.2 ಗೈರುಹಾಜರಾಗಿದ್ದರು.
64 ವರ್ಷದ ದ್ರೌಪದಿ ಮುರ್ಮು ಅವರು ಯಶವಂತ್ ಸಿನ್ಹ ವಿರುದ್ಧ ಅಗಾಧ ಅಂತರದಿಂದ ಗೆದ್ದರು, ರಾಮ್ ನಾಥ್ ಕೋವಿಂದ್ ಅವರ ಉತ್ತರಾಧಿಕಾರಿಯಾಗಿ ದೇಶದ 15 ನೇ ರಾಷ್ಟ್ರಪತಿಯಾಗಲು ಸಂಸದರು ಮತ್ತು ಶಾಸಕರಿಂದ ಶೇಕಡಾ 64ಕ್ಕೂ ಹೆಚ್ಚು ಮತಗಳನ್ನು ಪಡೆದರು.
ನಿನ್ನೆ 10 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಮತ ಎಣಿಕೆ ಪ್ರಕ್ರಿಯೆಯ ನಂತರ, ಚುನಾವಣಾಧಿಕಾರಿ ಪಿ ಸಿ ಮೋದಿ ಅವರು ಮುರ್ಮು ಅವರನ್ನು ವಿಜಯಿ ಎಂದು ಘೋಷಿಸಿದರು, ದ್ರೌಪದಿ ಮುರ್ಮು ಅವರು ಪಡೆದ ಮತಗಳ ಮೌಲ್ಯ 6,76,803 ಆದರೆ ಯಶವಂತ್ ಸಿನ್ಹ ಅವರದ್ದು 3,80,177.