ಸಿಧು ಮೂಸೆವಾಲ ಹತ್ಯೆ ಪ್ರಕರಣ, ಪುಣೆ ಪೊಲೀಸರಿಂದ ಶೂಟರ್ ಬಂಧನ
ಪುಣೆ: ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲ ಹತ್ಯೆ ಪ್ರಕರಣದ ಶೂಟರ್ ಸಂತೋಷ್ ಜಾಧವ್ ನನ್ನು ಪುಣೆ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಮೂಸೆವಾಲ ಹತ್ಯೆ ಪ್ರಕರಣದ ಶಂಕಿತ ಜಾಧವ್ ನ ಸಹಚರನೊಬ್ಬನನ್ನು ಸಹ ಪುಣೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯಿ ಗುಂಪಿನ ಸದಸ್ಯನಾದ ಜಾಧವ್ ನನ್ನು ಪುಣೆ ಜಿಲ್ಲೆಯ ಮಾಂಚರ್ ಪೊಲೀಸ್ ಠಾಣೆಯಲ್ಲಿ 2021ರಲ್ಲಿ ದಾಖಲಾದ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ಆತ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ. ಮೂಸ್ ವಾಲಾ ಹತ್ಯೆ ತನಿಖೆಯಲ್ಲಿ ಜಾಧವ್ ಮತ್ತು ನಾಗನಾಥ್ ಸೂರ್ಯವಂಶಿಯ ಹೆಸರು ಕೇಳಿಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
2021ರ ಹತ್ಯೆ ಪ್ರಕರಣದ ನಂತರ ಜಾಧವ್ ಗಾಗಿ ತೀವ್ರ ಹುಡುಕಾಟ ನಡೆಸಿದ ಪುಣೆ ಗ್ರಾಮಾಂತರ ಪೊಲೀಸರು, ಆತನಿಗೆ ಆಶ್ರಯ ನೀಡಿದ್ದ ಆರೋಪಿ ಸಿದ್ಧೇಶ್ ಕಾಂಬ್ಳೆ ಅಲಿಯಾಸ್ ಮಹಾಕಾಲ್ ನನ್ನು ಬಂಧಿಸಿದ್ದರು. ಪುಣೆ ಗ್ರಾಮಾಂತರ ಪೊಲೀಸರು ಬಿಷ್ಣೋಯ್ ಗ್ಯಾಂಗ್ ಸದಸ್ಯ ಮಹಾಕಾಲ್ ನನ್ನು ಕಳೆದ ವಾರ ಮಂಚಾರ್ ಪೊಲೀಸ್ ಠಾಣೆಯಲ್ಲಿ ಮೊಕಾ ಪ್ರಕರಣದಲ್ಲಿ ಬಂಧಿಸಿದ್ದರು.
ಮೂಸ್ ವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಘಟಕ ಮತ್ತು ಪಂಜಾಬ್ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಚಿತ್ರಕಥೆಗಾರ ಸಲೀಂ ಖಾನ್ ಮತ್ತು ಅವರ ನಟ-ಮಗ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮಹಾಕಾಲ್ ನನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ.
ಜಾಧವ್ ಪತ್ತೆಗಾಗಿ ಪುಣೆ ಗ್ರಾಮಾಂತರ ಪೊಲೀಸರು ಕಳೆದ ವಾರ ಗುಜರಾತ್ ಮತ್ತು ರಾಜಸ್ಥಾನಕ್ಕೆ ಹಲವು ತಂಡಗಳನ್ನು ಕಳುಹಿಸಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ