ಮುಂಬೈ: ಕೇಂದ್ರ ಸರ್ಕಾರದ ಅಗ್ನಿಪಥ್ ನೇಮಕಾತಿ ಯೋಜನೆಯ ವಿರುದ್ಧ ಯುವಕರು ಬೀದಿಗಿಳಿದಿದ್ದು, ಈಗ ಪ್ರತಿಭಟನೆಯಲ್ಲಿ ಭಾಗಿಯಾದ ಯುವಕರು ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾಗಬಹುದು ಎಂದು ಧರಣಿಯಲ್ಲಿ ಭಾಗವಹಿಸಿದ ಉದ್ಯೋಗ ಆಕಾಂಕ್ಷಿಗಳಿಗೆ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಅವರು ಶನಿವಾರ ಎಚ್ಚರಿಕೆ ನೀಡಿದ್ದಾರೆ.
ಈ ರೀತಿಯ ಹಿಂಸಾಚಾರವನ್ನು ನಾವು ಖಂಡಿಸುತ್ತೇವೆ. ಇದು ಸಮಸ್ಯೆಗೆ ಪರಿಹಾರವಲ್ಲ. ನೇಮಕಾತಿಯಲ್ಲಿ ಕೊನೆಯ ಹಂತವೆಂದರೆ ಪೊಲೀಸ್ ಪರಿಶೀಲನೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರು ಪೊಲೀಸರಿಂದ ಕ್ಲಿಯರೆನ್ಸ್ ಪಡೆಯುವುದಿಲ್ಲ ಎಂದು ವಾಯುಪಡೆಯ ಮುಖ್ಯಸ್ಥ(ಸಿಎಎಸ್) ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಹೇಳಿದ್ದಾರೆ.
ಪ್ರತಿಭಟನಾಕಾರರು ಈಗ ಮಾಡಬೇಕಾಗಿರುವುದೇನೆಂದರೆ ಯೋಜನೆ ಕುರಿತಾಗಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವುದು, ಯೋಜನೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು. ಇದರಿಂದ ಯೋಜನೆಯ ಪ್ರಯೋಜನೆ ಅವರಿಗೆ ತಿಳಿಯಲಿದೆ. ಇದು ಅವರ ಮನಸ್ಸಿನಲ್ಲಿರುವ ಎಲ್ಲಾ ಅನುಮಾನಗಳನ್ನು ನಿವಾರಿಸುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ಸೇನೆಗೆ ಈ ವರ್ಷ 17 ರಿಂದ 23 ವರ್ಷದೊಳಗಿನ 46,000 ಯುವಕರನ್ನು ನೇಮಿಸಿಕೊಳ್ಳಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ವಾಯುಪಡೆ ಸೇರಿದಂತೆ ಮೂರು ಸೇನಾಪಡೆಗಳ ಮುಖ್ಯಸ್ಥರೊಂದಿಗೆ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಸಹ ಭಾಗವಹಿಸಿದ್ದರು.
Advertisement