'ಪ್ರಧಾನಿಯವರೇ ನಿಮ್ಮ ಫ್ರೆಂಡ್ ಅಬ್ಬಾಸ್ ಅವರನ್ನು ಕೇಳಿ…'; ನರೇಂದ್ರ ಮೋದಿಗೆ ಅಸಾದುದ್ದೀನ್ ಓವೈಸಿ ಟಾಂಗ್

ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ಅವರ ಬಗ್ಗೆ ನೀಡಿದ ಹೇಳಿಕೆ ಆಕ್ಷೇಪಾರ್ಹವೇ ಅಥವಾ ಇಲ್ಲವೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಾಲ್ಯದ ಗೆಳೆಯ ಅಬ್ಬಾಸ್ ಅವರನ್ನು ಕೇಳಬೇಕು.
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ

ನವದೆಹಲಿ: ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ಅವರ ಬಗ್ಗೆ ನೀಡಿದ ಹೇಳಿಕೆ ಆಕ್ಷೇಪಾರ್ಹವೇ ಅಥವಾ ಇಲ್ಲವೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಾಲ್ಯದ ಗೆಳೆಯ ಅಬ್ಬಾಸ್ ಅವರನ್ನು ಕೇಳಬೇಕು ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ನೂಪುರ್ ಶರ್ಮಾ ಅವರ ಹೇಳಿಕೆಗಳು ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿ ದೇಶಾದ್ಯಂತ ಪ್ರತಿಭಟನೆಯ ಅಲೆಯನ್ನು ಎಬ್ಬಿಸಿದ ಒಂದು ವಾರದ ನಂತರ ಪ್ರಧಾನಿಯವರ ಮೇಲೆ ಓವೈಸಿ ಹೊಸ ದಾಳಿ ನಡೆಸಿದ್ದಾರೆ.

ತಮ್ಮ ತಾಯಿ ಹೀರಾಬೆನ್ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಬರೆದ ಬ್ಲಾಗ್ ಪೋಸ್ಟ್‌ನಲ್ಲಿ, ಅಬ್ಬಾಸ್ ಅವರೊಂದಿಗಿನ ತಮ್ಮ ನೆನಪುಗಳನ್ನು ಪ್ರಧಾನಿ ನೆನಪಿಸಿಕೊಂಡಿದ್ದರು. ನನ್ನ ತಂದೆಯ ಗೆಳೆಯರೊಬ್ಬರು ಸಮೀಪದ ಹಳ್ಳಿಯಲ್ಲಿ ವಾಸಿಸುತ್ತಿದ್ದರು, ಅವರ ಅಕಾಲಿಕ ಮರಣದ ನಂತರ, ನನ್ನ ತಂದೆ ತನ್ನ ಸ್ನೇಹಿತನ ಮಗ ಅಬ್ಬಾಸ್ ನನ್ನು ನಮ್ಮ ಮನೆಗೆ ಕರೆತಂದರು. ಅವರು ನಮ್ಮೊಂದಿಗೆ ಉಳಿದುಕೊಂಡು ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ನಮ್ಮ ತಾಯಿ ಅಬ್ಬಾಸ್ ಬಗ್ಗೆ ನಮಗೆ ತೋರಿದ ಪ್ರೀತಿ ಮತ್ತು ಕಾಳಜಿಯನ್ನೇ ಸಮನಾಗಿ ಅಬ್ಬಾಸ್ ಮೇಲೆ ತೋರಿಸಿದ್ದರು. ಪ್ರತಿ ವರ್ಷ ಈದ್‌ನಲ್ಲಿ ನಮ್ಮ ತಾಯಿ ಅವನ ನೆಚ್ಚಿನ ಭಕ್ಷ್ಯಗಳನ್ನು ತಯಾರಿಸುತ್ತಿದ್ದರು ಎಂದು ಮೋದಿ ಬರೆದಿದ್ದಾರೆ.

ಇದಕ್ಕೆ  ಪ್ರತ್ಯುತ್ತರ ನೀಡಿರುವ  ಓವೈಸಿ, “ಪ್ರಧಾನಿ ಎಂಟು ವರ್ಷಗಳ ನಂತರ ತಮ್ಮ ಸ್ನೇಹಿತನನ್ನು ನೆನಪಿಸಿಕೊಂಡಿದ್ದಾರೆ. ನಿಮಗೆ ಈ ಸ್ನೇಹಿತನಿದ್ದಾನೆಂದು ನಮಗೆ ತಿಳಿದಿರಲಿಲ್ಲ. ನಾವು ಪ್ರಧಾನಿಗೆ ಮನವಿ ಮಾಡುತ್ತೇವೆ, ದಯವಿಟ್ಟು ಅಬ್ಬಾಸ್ ಅವರಿಗೆ ಕರೆ ಮಾಡಿ. ಅವರು ಅಸಾದುದ್ದೀನ್ ಓವೈಸಿ ಮತ್ತು ಉಲೇಮಾಗಳ (ಧಾರ್ಮಿಕ ಮುಖಂಡರು) ಭಾಷಣಗಳನ್ನು ಕೇಳಲು ಹೇಳಿ. ನಾವು ಸುಳ್ಳು ಹೇಳುತ್ತಿದ್ದೇವಾ ಎಂದು ಕೇಳಿ ಎಂದು ಮಾತಿನಲ್ಲೇ ಪ್ರಧಾನಿ ಮೋದಿಯನ್ನ ಕುಟುಕಿದ್ದಾರೆ.

ಒಂದು ವೇಳೆ ನೀವು ಅಬ್ಬಾಸ್ ಅವರ ವಿಳಾಸ ಹಂಚಿಕೊಂಡರೆ ನಾನೇ ಅಬ್ಬಾಸ್ ಬಳಿಗೆ ಹೋಗುತ್ತೇನೆ. ಪ್ರವಾದಿ ಮಹಮ್ಮದ್ ಬಗ್ಗೆ ನೂಪುರ್ ಶರ್ಮಾ ಹೇಳಿರುವುದು ಆಕ್ಷೇಪಾರ್ಹವೇ ಅಥವಾ ಇಲ್ಲವೇ ಎಂದು ನಾನು ಅವರನ್ನು ಕೇಳುತ್ತೇನೆ ಎಂದು ಟಾಂಗ್ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com