ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಯಶ್ವಂತ್ ಸಿನ್ಹಾ ಆಯ್ಕೆ
ಕಾಂಗ್ರೆಸ್, ಟಿಎಂಸಿ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ 13 ಪ್ರತಿಪಕ್ಷಗಳ ಒಮ್ಮತದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಅವರ ಹೆಸರನ್ನು ಮಂಗಳವಾರ ಅಂತಿಮಗೊಳಿಸಲಾಗಿದೆ.
Published: 21st June 2022 04:42 PM | Last Updated: 21st June 2022 06:47 PM | A+A A-

ಯಶವಂತ್ ಸಿನ್ಹಾ
ನವದೆಹಲಿ: ಕಾಂಗ್ರೆಸ್, ಟಿಎಂಸಿ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ 13 ಪ್ರತಿಪಕ್ಷಗಳ ಒಮ್ಮತದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಅವರ ಹೆಸರನ್ನು ಮಂಗಳವಾರ ಅಂತಿಮಗೊಳಿಸಲಾಗಿದೆ.
ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸಂಸತ್ ಭವನದಲ್ಲಿ ಕರೆದಿದ್ದ ಸಭೆಯಲ್ಲಿ ಸಿನ್ಹಾ ಅವರ ಹೆಸರನ್ನು ಒಪ್ಪಿಕೊಳ್ಳಲಾಗಿದೆ.
ಶರದ್ ಪವಾರ್, ಗೋಪಾಲಕೃಷ್ಣ ಗಾಂಧಿ ಮತ್ತು ಫಾರೂಕ್ ಅಬ್ದುಲ್ಲಾ ಅವರು ತಾವು ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗುವುದಿಲ್ಲ ಎಂದು ಹೇಳಿದ ನಂತರ ಸಿನ್ಹಾ ಅವರ ಹೆಸರು ಕೇಳಿಬಂದಿತ್ತು.
ಇದನ್ನು ಓದಿ: ಟಿಎಂಸಿ ತೊರೆದ ಯಶ್ವಂತ್ ಸಿನ್ಹಾ: ವಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಅವರು ಹೇಳಿದ್ದಿಷ್ಟು...
ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಸಾಮಾನ್ಯ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲು ನಾವು (ವಿರೋಧ ಪಕ್ಷಗಳು) ನಿರ್ಧರಿಸಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ಹೇಳಿದ್ದಾರೆ.
ಇಂದಿನ ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಜೈರಾಮ್ ರಮೇಶ್, ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ, ಡಿಎಂಕೆಯ ತಿರುಚಿ ಶಿವ, ಸಿಪಿಐ-ಎಂನ ಸೀತಾರಾಂ ಯೆಚೂರಿ ಮತ್ತು ಸಿಪಿಐನ ಡಿ ರಾಜಾ ಅವರು ಭಾಗವಹಿಸಿದ್ದರು.