ಮಹಾ ರಾಜಕೀಯ ಬಿಕ್ಕಟ್ಟು: ರಾಜೀನಾಮೆ ನೀಡಲು ಸಿದ್ಧ ಎಂದ ಸಿಎಂ ಉದ್ಧವ್ ಠಾಕ್ರೆ
ತಮ್ಮ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡ ನಂತರ ಮೊದಲ ಬಾರಿಗೆ ಫೇಸ್ ಬುಕ್ ಲೈವ್ ಮೂಲಕ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ತಾವು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.
Published: 22nd June 2022 07:00 PM | Last Updated: 22nd June 2022 07:00 PM | A+A A-

ಉದ್ಧವ್ ಠಾಕ್ರೆ
ಮುಂಬೈ: ತಮ್ಮ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡ ನಂತರ ಮೊದಲ ಬಾರಿಗೆ ಫೇಸ್ ಬುಕ್ ಲೈವ್ ಮೂಲಕ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ತಾವು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ. ನಾನು ಕುರ್ಚಿಗಾಗಿ ಹೋರಾಡುವುದಿಲ್ಲ. ಮುಖ್ಯಮಂತ್ರಿ ಸ್ಥಾನದ ಮೇಲೆ ಯಾವುದೇ ಆಸೆ ಇಲ್ಲ ಮತ್ತು ನಮ್ಮ ಪಕ್ಷ ಶಿವಸೇನೆಯು ಹಿಂದುತ್ವವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
"ಸೂರತ್ ಮತ್ತು ಇತರ ಸ್ಥಳಗಳಲ್ಲಿ ಕುಳಿತು ಏಕೆ ಹೇಳಿಕೆಗಳನ್ನು ನೀಡುತ್ತೀರಿ? ಮುಖ್ಯಮಂತ್ರಿ ಮತ್ತು ಶಿವಸೇನೆ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಲು ನಾನು ಅಸಮರ್ಥನೆಂದು ನನ್ನ ಮುಂದೆ ಬಂದು ಹೇಳಿ. ನಾನು ತಕ್ಷಣ ರಾಜೀನಾಮೆ ನೀಡುತ್ತೇನೆ. ನಾನು ನನ್ನ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿದ್ದೇನೆ ಮತ್ತು ನೀವೇ ಬಂದು ಅದನ್ನು ರಾಜಭವನಕ್ಕೆ ಕೊಂಡೊಯ್ಯಿರಿ ಎಂದು ಠಾಕ್ರೆ ಹೇಳಿದ್ದಾರೆ.
ಇದನ್ನು ಓದಿ: ಶಿವಸೇನಾ ಬಂಡಾಯ ನಾಯಕರಿಂದ ನಿರ್ಣಯ ಅಂಗೀಕಾರ, ಶಾಸಕಾಂಗ ಪಕ್ಷದ ನಾಯಕರಾಗಿ ಏಕನಾಥ್ ಶಿಂಧೆ ನೇಮಕ
ಮುಖ್ಯಮಂತ್ರಿ ಹುದ್ದೆಗೆ ಒಬ್ಬ ಶಾಸಕ ಆಕ್ಷೇಪಿಸಿದರೂ ನಾನು ರಾಜೀನಾಮೆ ನೀಡುತ್ತೇನೆ ಎಂದು ಉದ್ಧವ್ ಠಾಕ್ರೆ ಅವರು ಹೇಳಿದ್ದಾರೆ.
34 ಶಿವಸೇನೆ ಶಾಸಕರು ಬಂಡಾಯಗಾರ ಏಕನಾಥ್ ಶಿಂಧೆ ಅವರನ್ನು ತಮ್ಮ ನಾಯಕನನ್ನಾಗಿ ಬೆಂಬಲಿಸಿ ರಾಜ್ಯಪಾಲರಿಗೆ ಪತ್ರ ಬರೆದ ನಂತರ ಉದ್ಧವ್ ಠಾಕ್ರೆ ಮಾತನಾಡಿದ್ದು, ಏಕನಾಥ್ ಶಿಂಧೆ ಅವರೊಂದಿಗೆ ಹೋಗಿರುವ ಶಾಸಕರಿಂದ ನನಗೆ ಕರೆಗಳು ಬರುತ್ತಿವೆ; ಅವರು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆಂದು ಹೇಳುತ್ತಿದ್ದಾರೆ ಎಂದು ಮಹಾ ಸಿಎಂ ತಿಳಿಸಿದ್ದಾರೆ.
ಬಿಜೆಪಿ ಆಡಳಿತವಿರುವ ಅಸ್ಸಾಂನ ಗುವಾಹಟಿಯ ಹೋಟೆಲ್‌ನಲ್ಲಿರುವ ಬಂಡಾಯ ಶಾಸಕರನ್ನು ಉದ್ಧವ್ ಠಾಕ್ರೆ ಅವರು ವಜಾಗೊಳಿಸಿದ ಒಂದು ದಿನದ ನಂತರ ಏಕನಾಥ್ ಶಿಂಧೆ ಅವರು ಇನ್ನೂ ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ ಎಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ಬಂಡಾಯ ಶಾಸಕರು ಪತ್ರ ಬರೆದಿದ್ದಾರೆ.
ಶಿವಸೇನೆ ಪಕ್ಷದ ಮುಖ್ಯ ಸಚೇತಕ ಸುನೀಲ್ ಪ್ರಭು ಅವರು ಕರೆದಿರುವ ಸಭೆ ಕಾನೂನುಬಾಹಿರವಾಗಿದೆ ಎಂದು ಬಂಡಾಯ ಶಾಸಕರು ಹೇಳಿದ್ದಾರೆ.
ಬಂಡಾಯ ಗುಂಪಿನಿಂದ ಭರತ್ ಗೊಗಾವ್ಲೆ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ ಮತ್ತು ಅವರು ಇನ್ನೂ ಶಿವಸೇನೆಯೊಂದಿಗೆ ಇದ್ದಾರೆ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ. ಹೊಸ ನೇಮಕಾತಿಯು ಉದ್ಧವ್ ಠಾಕ್ರೆ ಅವರ ನಾಮನಿರ್ದೇಶಿತ ಸುನೀಲ್ ಪ್ರಭು ಅವರನ್ನು ಮುಖ್ಯ ಸಚೇತಕರನ್ನಾಗಿ ರದ್ದುಗೊಳಿಸಿದೆ ಎಂದು ಬಂಡಾಯ ಶಾಸಕರು ಹೇಳಿದ್ದಾರೆ. ಪತ್ರಕ್ಕೆ ಸಹಿ ಮಾಡಿರುವ 34 ಮಂದಿಯಲ್ಲಿ ನಾಲ್ವರು ಪಕ್ಷೇತರ ಶಾಸಕರು ಸೇರಿದ್ದಾರೆ.