'ವರ್ಷ ಬಂಗಲೆ ಬಾಗಿಲು ನಮಗೆ ಯಾವತ್ತೂ ತೆರೆಯಲೇ ಇಲ್ಲ, ನಮ್ಮನ್ನು ಅವಮಾನಿಸಲಾಗುತ್ತಿತ್ತು' ಬಂಡಾಯ ಶಾಸಕರಿಂದ ಸಿಎಂ ಉದ್ಧವ್ ಠಾಕ್ರೆಗೆ ಪತ್ರ

ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದಲ್ಲಿನ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಸಂಪುಟ ಸಚಿವ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಪಾಳೆಯಕ್ಕೆ ಸೇರಲು ಶಿವಸೇನೆಯ ಇನ್ನೂ ಮೂವರು ಶಾಸಕರು ಗುರುವಾರ ಅಸ್ಸಾಂನ ಗುವಾಹಟಿಗೆ ತೆರಳಿದ್ದಾರೆ.
ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯ ಶಾಸಕರು
ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯ ಶಾಸಕರು

ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದಲ್ಲಿನ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಸಂಪುಟ ಸಚಿವ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಪಾಳೆಯಕ್ಕೆ ಸೇರಲು ಶಿವಸೇನೆಯ ಇನ್ನೂ ಮೂವರು ಶಾಸಕರು ಗುರುವಾರ ಅಸ್ಸಾಂನ ಗುವಾಹಟಿಗೆ ತೆರಳಿದ್ದಾರೆ.

ಈ ಮಧ್ಯೆ ಇಂದು ಬಂಡಾಯ ನಾಯಕ ಏಕನಾಥ್ ಶಿಂಧೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದು ತಮ್ಮ ಅಸಮಾಧಾನಕ್ಕೆ ಕಾರಣವೇನು, ಸರ್ಕಾರದಲ್ಲಿ ತಮಗೆ ಏನಾಗುತ್ತಿತ್ತು, ತಮಗೆ ಯಾವ ರೀತಿ ಅನ್ಯಾಯ, ಅಪಮಾನವಾಗುತ್ತಿತ್ತು ಎಂದು ಪತ್ರದಲ್ಲಿ ಸವಿವರವಾಗಿ ಬರೆದು ತಿಳಿಸಿದ್ದಾರೆ.

ಏಕನಾಥ್ ಶಿಂಧೆ ಬರೆದ ಪತ್ರದಲ್ಲಿ ಏನಿದೆ?: ರಾಜ್ಯದಲ್ಲಿ ಮಹಾ ಅಘಾಡಿ ಮೈತ್ರಿ ಸರ್ಕಾರದಲ್ಲಿ ಶಿವಸೇನೆಯ ಸಿಎಂ ಇದ್ದರೂ ವರ್ಷಾ ಬಂಗಲೆಗೆ (ಸಿಎಂ ನಿವಾಸ) ಭೇಟಿ ನೀಡುವ ಅವಕಾಶವನ್ನು ಪಕ್ಷದ ಶಾಸಕರು ಹೊಂದಿರಲಿಲ್ಲ. ಸಿಎಂ ಅವರನ್ನು ಭೇಟಿಯಾಗಬೇಕೋ ಬೇಡವೋ ಎಂದು ಅವರ ಸುತ್ತಲಿನ ಜನ ನಿರ್ಧರಿಸುತ್ತಿದ್ದರು. ನಮ್ಮನ್ನು ಅವಮಾನಿಸಲಾಗುತ್ತಿತ್ತು. ಸಿಎಂ ಯಾವತ್ತೂ ಸೆಕ್ರೆಟರಿಯೇಟ್‌ನಲ್ಲಿ ಇರುತ್ತಿರಲಿಲ್ಲ ಬದಲಾಗಿ ಮಾತೋಶ್ರೀ (ಠಾಕ್ರೆ ನಿವಾಸ) ದಲ್ಲಿ ಇರುತ್ತಿದ್ದರು.

ಮುಂದುವರಿದು ಏಕನಾಥ್ ಶಿಂಧೆಯ ಬೆಂಬಲಿಗ ಬಂಡಾಯ ಶಾಸಕರ ದೂರುಗಳನ್ನು ಪತ್ರದಲ್ಲಿ ಲಗತ್ತಿಸಲಾಗಿದೆ. ನಾವು ಸಿಎಂ ಸುತ್ತಲಿನವರಿಗೆ ಕರೆ ಮಾಡುತ್ತಿದ್ದೆವು, ಆದರೆ ನಮ್ಮ ಕರೆಗೆ ಕ್ಯಾರೇ ಅನ್ನುತ್ತಿರಲಿಲ್ಲ. ಈ ಎಲ್ಲ ಸಂಗತಿಗಳಿಂದ ಬೇಸತ್ತು ಏಕನಾಥ್ ಶಿಂಧೆ ಅವರ ಮನವೊಲಿಸಿದ್ದೇವೆ. ನಾವು ಸಿಎಂ ಅವರನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೂ, ನಮ್ಮ 'ನಿಜವಾದ ವಿರೋಧ'ದ ಜನರು -- ಕಾಂಗ್ರೆಸ್ ಮತ್ತು ಎನ್‌ಸಿಪಿ ಅವರನ್ನು ಭೇಟಿ ಮಾಡಲು ಅವಕಾಶಗಳನ್ನು ಪಡೆಯುತ್ತಿದ್ದೆವು. ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸರಿಯಾಗಿ ಹಣ ಬಿಡುಗಡೆಯಾಗುತ್ತಿರಲಿಲ್ಲ. 

ಹಿಂದುತ್ವ ಮತ್ತು ರಾಮಮಂದಿರವು ಪಕ್ಷಕ್ಕೆ ನಿರ್ಣಾಯಕ ವಿಷಯವಾಗಿರುವಾಗ, ಪಕ್ಷವು ನಮ್ಮನ್ನು ಅಯೋಧ್ಯೆಗೆ ಭೇಟಿ ನೀಡುವುದನ್ನು ಏಕೆ ತಡೆಯಿತು? ಆದಿತ್ಯ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕರನ್ನು ಕರೆಸಿ ಅಯೋಧ್ಯೆಗೆ ಹೋಗದಂತೆ ತಡೆಯಲಾಯಿತು ಎಂದೆಲ್ಲ ಪತ್ರದಲ್ಲಿ ದೀರ್ಘವಾಗಿ ಶಿವಸೇನೆ ನಾಯಕರನ್ನು ದೂರಲಾಗಿದೆ.

ವಿರೋಧ ಪಕ್ಷದಲ್ಲಿ ಕೂರಲು ಎನ್‌ಸಿಪಿ ಯೋಜನೆ?: ಸರ್ಕಾರ ಉಳಿದರೆ ನಾವು ಅಧಿಕಾರದಲ್ಲಿರುತ್ತೇವೆ, ಸರ್ಕಾರ ಹೋದರೆ ನಾವು ಪ್ರತಿಪಕ್ಷದಲ್ಲಿ ಕುಳಿತುಕೊಳ್ಳುತ್ತೇವೆ, ಒಂದು ರಾಜ್ಯದಲ್ಲಿ ಸರ್ಕಾರ ರಚಿಸಲು, ನೀವು ಇನ್ನೊಂದು ರಾಜ್ಯದಲ್ಲಿ ನಿಮ್ಮ ಶಕ್ತಿಯನ್ನು ತೋರಿಸಲು ಹೋಗಿರುವುದು ಸರಿಯಲ್ಲ, ತಮ್ಮ ಶಾಸಕರನ್ನು ರಾಜ್ಯಪಾಲರಿಗೆ ತೋರಿಸಲು ಇಲ್ಲಿಗೆ ಬರಬೇಕು. ನಂತರ ರಾಜ್ಯಪಾಲರು ಅಗತ್ಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಎಂವಿಎಯಲ್ಲಿನ ರಾಜಕೀಯ ಅಸ್ಥಿರತೆಯ ಬಗ್ಗೆ ಎನ್‌ಸಿಪಿ ನಾಯಕ ಜಯಂತ್ ಪಾಟೀಲ್ ಹೇಳಿದ್ದಾರೆ.

ಈ ಮಧ್ಯೆ ಇಂದು ಸಂಜೆಯೇ ಉದ್ಧವ್ ಠಾಕ್ರೆ ರಾಜೀನಾಮೆ ನೀಡುತ್ತಾರೆಯೇ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನೊಂದೆಡೆ ಬಿಜೆಪಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿದ್ದು, ಬಿಜೆಪಿ ಬಂಡಾಯ ಶಿವಸೇನೆ ಶಾಸಕರನ್ನು ಸೆಳೆದುಕೊಂಡು ಸರ್ಕಾರ ರಚಿಸುತ್ತಾ ಎಂಬ ಕುತೂಹಲ ಮೂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com