ಎಸ್‌ಎಫ್‌ಐ ಕಾರ್ಯಕರ್ತರಿಂದ ರಾಹುಲ್ ಗಾಂಧಿ ವಯನಾಡ್ ಕಚೇರಿ ಧ್ವಂಸ; ಇದು ಗೂಂಡಾಗಳ ದಾಳಿ ಎಂದ ಕಾಂಗ್ರೆಸ್
ಭಾರತೀಯ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ಕಾರ್ಯಕರ್ತರು ಕೇರಳದ ವಯನಾಡಿನ ಕಲ್ಪೆಟ್ಟಾದಲ್ಲಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಂಸದರ ಕಚೇರಿ ಕಡೆಗೆ ಶುಕ್ರವಾರ ಮಧ್ಯಾಹ್ನ ನಡೆಸಿದ ಮೆರವಣಿಗೆ...
Published: 24th June 2022 07:20 PM | Last Updated: 24th June 2022 07:20 PM | A+A A-

ರಾಹುಲ್ ಗಾಂಧಿ ಕಚೇರಿ
ಕೋಝಿಕೋಡ್: ಭಾರತೀಯ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ಕಾರ್ಯಕರ್ತರು ಕೇರಳದ ವಯನಾಡಿನ ಕಲ್ಪೆಟ್ಟಾದಲ್ಲಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಂಸದರ ಕಚೇರಿ ಕಡೆಗೆ ಶುಕ್ರವಾರ ಮಧ್ಯಾಹ್ನ ನಡೆಸಿದ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ್ದು, ಕಚೇರಿಗೆ ನುಗ್ಗಿ ಕಟ್ಟಡದ ಬಾಗಿಲು, ಕಿಟಕಿಗಳನ್ನು ಧ್ವಂಸಗೊಳಿಸಿದ್ದಾರೆ.
ಗುಡ್ಡಗಾಡು ಪ್ರದೇಶವಾದ ವಯನಾಡಿನಲ್ಲಿ ಈಗ ತೀವ್ರವಾಗಿ ಕಾಡುತ್ತಿರುವ ಪರಿಸರ ಸೂಕ್ಷ್ಮ ವಲಯ(ಇಎಸ್‌ಝಡ್) ವಿಚಾರದಲ್ಲಿ ಸಂಸದರು ಮಧ್ಯಪ್ರವೇಶಿಸದಿರುವುದರ ವಿರುದ್ಧ ಎಸ್ಎಫ್ಐ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿತು. ಈ ವೇಳೆ ಎಸ್‌ಎಫ್‌ಐ ವಿದ್ಯಾರ್ಥಿಗಳು ಪೊಲೀಸರನ್ನು ಧಿಕ್ಕರಿಸಿ ಸಂಸದ ಕಚೇರಿಗೆ ನುಗ್ಗಿ ಕಿಟಕಿ ಗಾಜುಗಳನ್ನು ಒಡೆದು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ ಎನ್ನಲಾಗಿದೆ. ಈ ಗಲಾಟೆಯಲ್ಲಿ ಸಂಸದರ ಕಚೇರಿ ಸಿಬ್ಬಂದಿ ಆಗಸ್ಟಿನ್ ಸಹ ಗಾಯಗೊಂಡಿದ್ದಾರೆ.
ಇದನ್ನು ಓದಿ: ಕಾಂಗ್ರೆಸ್ ಅನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಇಡಿ ಅಧಿಕಾರಿಗಳಿಗೆ ಗೊತ್ತಿದೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಪರಿಸ್ಥಿತಿ ನಿಯಂತ್ರಿಸಲು ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳೊಂದಿಗೂ ಎಸ್‌ಎಫ್‌ಐ ಕಾರ್ಯಕರ್ತರು ವಾಗ್ವಾದ ನಡೆಸಿದರು. ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿ ಕೆಲವರನ್ನು ವಶಕ್ಕೆ ಪಡೆದರು. ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕಲ್ಪೆಟ್ಟಾ ಡಿವೈಎಸ್ಪಿ ಸುನೀಲ್ ಎಂಡಿ ನೇತೃತ್ವದಲ್ಲಿ ಪರಿಸ್ಥಿತಿ ನಿಯಂತ್ರಿಸಲಾಗಿದೆ.
ಘಟನೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪ್ರತಿಪಕ್ಷದ ನಾಯಕ ವಿಡಿ ಸತೀಶನ್ ಅವರು, ಈ ದಾಳಿಯು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಮತ್ತು "ಗೂಂಡಾರಾಜ" ಅನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
"ವಯನಾಡ್‌ನಲ್ಲಿರುವ ರಾಹುಲ್ ಗಾಂಧಿಯ ಅವರ ಸಂಸದರ ಕಚೇರಿ ಮೇಲೆ ಎಸ್‌ಎಫ್‌ಐ ಗೂಂಡಾಗಳು ಭೀಕರ ದಾಳಿ ನಡೆಸಿದ್ದಾರೆ. ಇದು ಕಾನೂನುಬಾಹಿರ ಮತ್ತು ಗೂಂಡಾಗಿರಿಯನ್ನು ತೋರಿಸುತ್ತದೆ. ಸಿಪಿಎಂ ಸಂಘಟಿತ ಮಾಫಿಯಾವಾಗಿ ಮಾರ್ಪಟ್ಟಿದೆ. ದಾಳಿಯನ್ನು ಬಲವಾಗಿ ಖಂಡಿಸುತ್ತವೆ" ಎಂದು ಕಾಂಗ್ರೆಸ್ ನಾಯಕ ಟ್ವೀಟ್ ಮಾಡಿದ್ದಾರೆ.