ಅಸ್ಸಾಂ ಬಿಜೆಪಿ ಸಚಿವರಿಂದ ಗುವಾಹಟಿ ಹೋಟೆಲ್ ನಲ್ಲಿ ಶಿವಸೇನೆ ಬಂಡಾಯ ಶಾಸಕರ ಭೇಟಿ
ಗುವಾಹಟಿ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಂಡೆದ್ದು ಗುವಾಹಟಿಯಲ್ಲಿರುವ ಶಿವಸೇನೆಯ ಶಿಂಧೆ ಬಣದ ಶಾಸಕರನ್ನು ಹೋಟೆಲ್ ನಲ್ಲಿ ಅಸ್ಸಾಂ ಬಿಜೆಪಿ ಸಚಿವರು ಭೇಟಿ ಮಾಡಿದ್ದಾರೆ.
ಮಹಾರಾಷ್ಟ್ರದ ಬಂಡಾಯ ಶಾಸಕರೊಂದಿಗೆ ಅಸ್ಸಾಂ ನ ಬಿಜೆಪಿ ಸಚಿವರು ಸರಣಿ ಸಭೆಗಳನ್ನು ನಡೆಸಿದ್ದು, ಎರಡು ದಿನಗಳ ಅವಧಿಯಲ್ಲಿ ಅಸ್ಸಾಂ ನ ವಸತಿ ಹಾಗೂ ನಗರ ವ್ಯವಹಾರಗಳ ಸಚಿವ ಸಿಂಘಾಲ್ ಮೂರನೇ ಬಾರಿಗೆ ಶಾಸಕರನ್ನು ಭೇಟಿಮಾಡಿ ಚರ್ಚೆ ನಡೆಸಿದ್ದಾರೆ.
ಈ ನಡುವೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಸಿಲ್ಚಾರ್ ನಲ್ಲಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ವಿಮಾನ ನಿಲ್ದಾಣದಿಂದ ವಾಪಸ್ಸಾಗುತ್ತಿದ್ದ ವೇಳೆ ಅಸ್ಸಾಂ ನಲ್ಲಿ ಬಂಡಾಯ ಶಾಸಕರಿರುವ ಗೋಟಾನಗರ್ ಪ್ರದೇಶಲ್ಲಿನ ರ್ಯಾಡಿಸನ್ ಬ್ಲೂ ಹೋಟೆಲ್ ನ ಮುಂಭಾಗದಲ್ಲಿ ಕಾರನ್ನು ನಿಲ್ಲಿಸಿ ಪತ್ರಕರ್ತರನ್ನು ಮಾತನಾಡಿಸಿದರು.
ಪಿಟಿಐ ಮಾಹಿತಿಯ ಪ್ರಕಾರ ಅಸ್ಸಾಂನ ಸಂಸದೀಯ ವ್ಯವಹಾರಗಳ ಸಚಿವರಾದ ಹಝಾರಿಕಾ, ಹೊಟೇಲ್ ಗೆ ಹೋಗಿ, ಸಿಂಘಾಲ್ ಬರುವುದಕ್ಕೂ ಮುನ್ನ ನಿರ್ಗಮಿಸಿದ್ದರು. ಸಿಂಘಾಲ್ ಹಾಗೂ ಹಜಾರಿಕಾ ಬಂಡಾಯ ಶಾಸಕರೊಂದಿಗೆ ಏನು ಚರ್ಚಿಸಿದರು ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

