ಬಹುಮತ ಸಾಬೀತಿಗೆ ಮಹಾರಾಷ್ಟ್ರ ಸರ್ಕಾರಕ್ಕೆ ರಾಜ್ಯಪಾಲ ಕೋಶ್ಯಾರಿ ಸೂಚನೆ: 'ಸುಪ್ರೀಂ' ಮೊರೆಹೋದ ಶಿವಸೇನೆ, ಇಂದು ಸಂಜೆ ವಿಚಾರಣೆ

ಬಂಡಾಯ ನಾಯಕ ಏಕನಾಥ್ ಶಿಂಧೆ ನೇತೃತ್ವದಲ್ಲಿ ಪಕ್ಷದ 40ಕ್ಕೂ ಹೆಚ್ಚು ಶಾಸಕರು ತಮ್ಮ ವಿರುದ್ಧ ಬಂಡಾಯವೆದ್ದ ಒಂದು ವಾರದ ನಂತರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಸೂಚನೆ ವಿರುದ್ಧ ಶಿವಸೇನೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. 
ಸಂಜಯ್ ರಾವತ್
ಸಂಜಯ್ ರಾವತ್

ಮುಂಬೈ: ಬಂಡಾಯ ನಾಯಕ ಏಕನಾಥ್ ಶಿಂಧೆ ನೇತೃತ್ವದಲ್ಲಿ ಪಕ್ಷದ 40ಕ್ಕೂ ಹೆಚ್ಚು ಶಾಸಕರು ತಮ್ಮ ವಿರುದ್ಧ ಬಂಡಾಯವೆದ್ದ ಒಂದು ವಾರದ ನಂತರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಸೂಚನೆ ವಿರುದ್ಧ ಶಿವಸೇನೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. 

ರಾಜ್ಯಪಾಲರು ನಾಳೆ ಬೆಳಗ್ಗೆ 11 ಗಂಟೆಗೆ ಮಹಾ ವಿಕಾಸ ಅಘಾಡಿ ಮೈತ್ರಿ ಸರ್ಕಾರಕ್ಕೆ ವಿಶ್ವಾಸಮತ ಪರೀಕ್ಷೆಗೆ ಕರೆದಿದ್ದು, ನಮ್ಮ 16 ಮಂದಿ ಶಾಸಕರ ಅನರ್ಹತೆ ವಿಚಾರವು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿರುವಾಗ ಬಹುಮತ ಸಾಬೀತಿಗೆ ಕರೆದಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಸಂಜಯ್ ರಾವತ್ ಸುದ್ದಿಸಂಸ್ಥೆ ಜೊತೆ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದಾರೆ.

16 ಶಾಸಕರ ಅನರ್ಹತೆಯನ್ನು ಸುಪ್ರೀಂ ಕೋರ್ಟ್ ಜುಲೈ 11 ರವರೆಗೆ ಮುಂದೂಡಿರುವಾಗ ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆಯನ್ನು  ರಾಜ್ಯಪಾಲರು ಹೇಗೆ ಕೇಳುತ್ತಾರೆ, ಶಾಸಕರ ಅನರ್ಹತೆ ಪ್ರಕರಣ ಇತ್ಯರ್ಥವಾಗುವವರೆಗೆ ಮತ್ತು ನೋಟಿಸ್ ಕಳುಹಿಸಿರುವ ಇತರ ವಿಷಯಗಳು ಇತ್ಯರ್ಥವಾಗುವವರೆಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪರೀಕ್ಷೆ ಹೇಗೆ ನಡೆಸಲು ಸಾಧ್ಯ ಎಂದು ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ ಟ್ವೀಟ್ ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೆ ಬಹುಮತ ಸಾಬೀತು ನಡೆಸಿದರೆ ಇದು ನ್ಯಾಯಾಲಯದ ನಿಂದನೆ ಪ್ರಕ್ರಿಯೆಯಾಗುತ್ತದೆ ಎಂದಿದ್ದಾರೆ.

ಈ ಮಧ್ಯೆ, ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ)ಯ ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಕೂಡ ರಾಜ್ಯಪಾಲರ ನಿರ್ಧಾರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ. 

ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಚವಾಣ್, ಸುಪ್ರೀಂ ಕೋರ್ಟ್ ಜುಲೈ 11 ರವರೆಗೆ ಪ್ರಕರಣದ ಯಥಾಸ್ಥಿತಿ ಕಾಯ್ದುಕೊಂಡಿದೆ. ಜುಲೈ 11ರವರೆಗೆ ರಾಜ್ಯ ವಿಧಾನಸಭೆಯ ಉಪಸಭಾಪತಿಯವರ ಮುಂದೆ ಅನರ್ಹತೆ ಪ್ರಕ್ರಿಯೆಗಳನ್ನು ತಡೆಹಿಡಿಯುವ ಸುಪ್ರೀಂ ಕೋರ್ಟ್‌ನ ಕ್ರಮವನ್ನು ಉಲ್ಲೇಖಿಸಿ ಮಾತನಾಡಿದ ಅವರು, ರಾಜ್ಯಪಾಲರ ಪತ್ರದ ವಿರುದ್ಧ ಎಂವಿಎ ಸುಪ್ರೀಂ ಕೋರ್ಟ್‌ಗೆ ಹೋಗಬೇಕಾಗುತ್ತದೆ ಎಂದಿದ್ದಾರೆ.

ಈ ಮಧ್ಯೆ, ರಾಜ್ಯಪಾಲರ ಪತ್ರದಿಂದ ಉಂಟಾಗುವ ಪರಿಸ್ಥಿತಿಯನ್ನು ಚರ್ಚಿಸಲು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಇಂದು ಸಂಜೆ ಎಂವಿಎ ನಾಯಕರ ಸಭೆಯನ್ನು ಕರೆದಿದ್ದಾರೆ. 

ಇಂದು ಸಂಜೆ 5 ಗಂಟೆಗೆ ವಿಚಾರಣೆ: ಶಿವಸೇನೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಇಂದು ಸಂಜೆಯೇ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ನಾಳೆ ಜೂನ್ 30 ರಂದು ಮಹಾರಾಷ್ಟ್ರದ ಮಹಾವಿಕಾಸ್ ಅಘಾಡಿ ಸರ್ಕಾರ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಿರ್ದೇಶನವನ್ನು ಪ್ರಶ್ನಿಸಿ ಶಿವಸೇನೆ ಮುಖ್ಯ ಸಚೇತಕ ಸುನಿಲ್ ಪ್ರಭು ಸಲ್ಲಿಸಿದ ಮನವಿಯನ್ನು ಇಂದು ಸಂಜೆ 5 ಗಂಟೆಗೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com