ಉದಯಪುರ ಹತ್ಯೆ ಪ್ರಕರಣ: ಬೆದರಿಕೆ ಕರೆ ದೂರು ನಿರ್ಲಕ್ಷ್ಯಿಸಿದ್ದ  ಎಎಸ್ಐ ಅಮಾನತು

ಟೈಲರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಆರೋಪದಡಿ ಉದಯಪುರದ ಧನ್ ಮಂಡಿ ಪೊಲೀಸ್ ಠಾಣೆಯ ಎಎಸ್‌ಐ ಒಬ್ಬರನ್ನು ಅಮಾನತು ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಜೈಪುರ: ಟೈಲರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಆರೋಪದಡಿ ಉದಯಪುರದ ಧನ್ ಮಂಡಿ ಪೊಲೀಸ್ ಠಾಣೆಯ ಎಎಸ್‌ಐ ಒಬ್ಬರನ್ನು ಅಮಾನತು ಮಾಡಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಜೂನ್ 11 ರಂದು ಕನ್ಹಯ್ಯ ಲಾಲ್ ವಿರುದ್ಧ ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಹವಾ ಸಿಂಗ್ ಘುಮಾರಿಯಾ ಹೇಳಿದ್ದಾರೆ.

ಜೂನ್ 15ರಂದು ಕನ್ಹಯ್ಯ ಜಾಮೀನಿನ ಮೇಲೆ ಹೊರಬಂದ ಬಳಿಕ ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪೊಲೀಸರಿಗೆ ತಿಳಿಸಿದ್ದರು. ಬಳಿಕ, ಸ್ಥಳೀಯ ಠಾಣಾಧಿಕಾರಿ ಅವರು, ದೂರುದಾರರು ಮತ್ತು ಎರಡೂ ಸಮುದಾಯದ ಕೆಲವರನ್ನು ಠಾಣೆಗೆ ಕರೆಸಿ ವಿಷಯ ಇತ್ಯರ್ಥಪಡಿಸಿದ್ದರು. ತಮಗೆ ಬರುತ್ತಿರುವ ಬೆದರಿಕೆ ಕರೆಗಳ ಬಗ್ಗೆ ಕನ್ಹಯ್ಯ ಲಾಲ್ ನೀಡಿದ್ದ ದೂರನ್ನು ಎಎಸ್‌ಐ ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಆರೋಪಿಸಲಾಗಿದೆ.

ಆದರೆ, ನಿನ್ನೆ ದುಷ್ಕರ್ಮಿಗಳು ಕನ್ಹಯ್ಯನ ಹತ್ಯೆ ಮಾಡಿದ್ದು, ಧನ್ ಮಂಡಿ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದ ಎಎಸ್‌ಐ ಭನ್ವರ್ ಲಾಲ್ ಅವರನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ ಎಂದು ಉದಯಪುರದ ಪೊಲೀಸ್ ಮಹಾನಿರೀಕ್ಷಕ ಹಿಂಗ್ಲಾಜ್ ಡಾನ್ ತಿಳಿಸಿದ್ದಾರೆ. ಮಧ್ಯಸ್ಥಿಕೆ ವಹಿಸಿದ್ದವರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಡಿಜಿ ತಿಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಇಬ್ಬರು ದುಷ್ಕರ್ಮಿಗಳು ಧನ್ ಮಂಡಿ ಪ್ರದೇಶದ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಕತ್ತು ಸೀಳಿ ಕೊಲೆ ಮಾಡಿದ್ದರು. ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದ ದುಷ್ಕರ್ಮಿಗಳು, ಇಸ್ಲಾಂ ಧರ್ಮ ಮತ್ತು ಪ್ರವಾದಿ ಮಹಮ್ಮದ್‌ ಅವರಿಗೆ ಅಪಮಾನ ಮಾಡಿದ್ದಕ್ಕಾಗಿ ಸೇಡು ತೀರಿಸಿಕೊಳ್ಳುತ್ತಿದ್ದೇವೆ ಎಂದು ವಿಡಿಯೋದಲ್ಲಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com