ಬಿಜೆಪಿಯಿಂದ ನಾಲ್ವರು ಟಿಆರ್ ಎಸ್ ಶಾಸಕರ ಖರೀದಿ ಯತ್ನ ಆರೋಪ: ದಾಖಲೆ ಬಿಡುಗಡೆ ಮಾಡಿದ ಸಿಎಂ ಚಂದ್ರಶೇಖರ್ ರಾವ್

ತೆಲಂಗಾಣ ಸರ್ಕಾರದ ನಾಲ್ವರು ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸಿತ್ತು, ಇಲ್ಲಿ ಕೂ ಆಪರೇಷನ್ ಕಮಲಕ್ಕೆ ಯತ್ನ ನಡೆದಿದೆ ಎಂಬ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಇತರರು ಆರೋಪ ಮಾಡಿದ್ದು ತೀವ್ರ ಸುದ್ದಿಯಾಗಿತ್ತು.
ಸುದ್ದಿಗೋಷ್ಠಿಯಲ್ಲಿ ವಿಡಿಯೊ ದಾಖಲೆಗಳನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್
ಸುದ್ದಿಗೋಷ್ಠಿಯಲ್ಲಿ ವಿಡಿಯೊ ದಾಖಲೆಗಳನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್

ಹೈದರಾಬಾದ್: ತೆಲಂಗಾಣ ಸರ್ಕಾರದ ನಾಲ್ವರು ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸಿತ್ತು, ಇಲ್ಲಿ ಕೂ ಆಪರೇಷನ್ ಕಮಲಕ್ಕೆ ಯತ್ನ ನಡೆದಿದೆ ಎಂಬ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಇತರರು ಆರೋಪ ಮಾಡಿದ್ದು ತೀವ್ರ ಸುದ್ದಿಯಾಗಿತ್ತು.

ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿಯಿಂದ ನಾಲ್ವರು ಟಿಆರ್‌ಎಸ್ ಶಾಸಕರ ಖರೀದಿ ಯತ್ನ ಆರೋಪಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಹಾಗೂ ಟಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ನಿನ್ನೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನು ನಾನು ಭಾರತದ ಮುಖ್ಯ ನ್ಯಾಯಮೂರ್ತಿ (CJI), ಇತರ ನ್ಯಾಯಾಧೀಶರು, ಕೋರ್ಟ್ ನ್ಯಾಯಾಧೀಶರು ಮತ್ತು CJ ಗಳು ಮತ್ತು ಇತರ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರು ಹಾಗೂ ಎಲ್ಲಾ ಪಕ್ಷಗಳ ಅಧ್ಯಕ್ಷರು ಮತ್ತು ಎಲ್ಲಾ ರಾಜ್ಯಗಳ ಸಿಎಂಗಳಿಗೂ ಕಳುಹಿಸಿದ್ದೇನೆ ಎಂದು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಹೇಳಿದ್ದಾರೆ. 

ಮುನುಗೋಡೆ ಉಪಚುನಾವಣೆ ಮುಗಿದ ಬೆನ್ನಲ್ಲೇ ನಿನ್ನೆ ಪ್ರಗತಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾವ್, ಪ್ರಜಾಪ್ರಭುತ್ವವನ್ನು ಉಳಿಸಲು ಕಾನೂನು ಪ್ರಕಾರ ಕ್ರಮಕೈಗೊಳ್ಳುವಂತೆ ನ್ಯಾಯಾಂಗಕ್ಕೆ ಮನವಿ ಮಾಡಿದರು. ಟಿಆರ್‌ಎಸ್ ಶಾಸಕರೊಂದಿಗೆ ಅವರನ್ನು ಮನವೊಲಿಸಿ ಪಕ್ಷಕ್ಕೆ ಸೇರಿಸಿಕೊಳ್ಳಲು ಯತ್ನಿಸುತ್ತಿರುವ  ಮೂರು ಗಂಟೆಗಳ ಅವಧಿಯ ವಿಡಿಯೋ ತುಣುಕನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದೇವೆ ಎಂದು ಅವರು ಹೇಳಿದರು.

ನಾವು 2015 ರಿಂದ ಬ್ರೋಕರ್‌ಗಳ ಕರೆ ಡೇಟಾವನ್ನು ಪಡೆದುಕೊಂಡಿದ್ದೇವೆ. ಅವರ ಲ್ಯಾಪ್‌ಟಾಪ್‌ಗಳಿಂದ ಪಡೆದಿದ್ದು, ಅದು 70 ಸಾವಿರದಿಂದ 80 ಸಾವಿರ ಪುಟಗಳನ್ನು ಹೊಂದಿದೆ ಎಂದು ರಾವ್ ಹೇಳಿದರು.

ತಾವು ಸಿಬಿಐ, ಜಾರಿ ನಿರ್ದೇಶನಾಲಯ, ಕೇಂದ್ರ ಜಾಗೃತ ಆಯೋಗ, ಎಲ್ಲಾ ರಾಜ್ಯಗಳ ಡಿಜಿಪಿಗಳು ಮತ್ತು ದೇಶದ ಎಲ್ಲಾ ಪ್ರಮುಖ ಸುದ್ದಿ ಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳ ಎಲ್ಲಾ ಏಜೆನ್ಸಿಗಳಿಗೆ ಸಾಕ್ಷಿಗಳನ್ನು ಕಳುಹಿಸುತ್ತಿದ್ದೇವೆ ಎಂದು ಕೂಡ ಹೇಳಿದರು.

ಅಮಿತ್ ಶಾ ಹೆಸರು 20 ಸಲ, ಮೋದಿ ಹೆಸರು 2 ಸಲ ಪ್ರಸ್ತಾಪ: ನಿನ್ನೆ ಮಾಧ್ಯಮಗಳ ಮುಂದೆ ವಿಡಿಯೊ ತುಣುಕುಗಳನ್ನು ತೋರಿಸಿದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್, ಆರೋಪಿಗಳು ತಾವು ಎಂಟು ರಾಜ್ಯಗಳಲ್ಲಿ ಸರ್ಕಾರಗಳನ್ನು ಉರುಳಿಸಿದ್ದೇವೆ. ದೆಹಲಿ, ತೆಲಂಗಾಣ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ ಸರ್ಕಾರಗಳನ್ನು ಉರುಳಿಸಲು ಯೋಜಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. 

ಟಿಆರ್‌ಎಸ್ ಶಾಸಕರನ್ನು ಭೇಟಿ ಮಾಡಿದ ಆರೋಪಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನು 20 ಬಾರಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಎರಡು ಬಾರಿ ಪ್ರಸ್ತಾಪಿಸಿದ್ದಾರೆ. ವಿರೋಧ ಪಕ್ಷಗಳ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ತಪ್ಪುಗಳನ್ನು ಹುಡುಕುತ್ತಿದೆ. ಪಶ್ಚಿಮ ಬಂಗಾಳದ ಸುಮಾರು 40 ತೃಣಮೂಲ ಕಾಂಗ್ರೆಸ್ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಪ್ರಧಾನಿ ಸಾರ್ವಜನಿಕರಿಗೆ ಹೇಳಿದ್ದನ್ನು ನೆನಪಿಸಿಕೊಂಡರು. 

ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿ ಹೇರಿ ತಪ್ಪು ಮಾಡಿದಾಗ ಜಯಪ್ರಕಾಶ ನಾರಾಯಣ ಅವರು ದೇಶಾದ್ಯಂತ ಚಳವಳಿ ಆರಂಭಿಸಿದ್ದು, ಅದು ‘ಅಜೇಯ ಇಂದಿರಾ’ ಸೋಲಿಗೆ ಕಾರಣವಾಯಿತು. ಅಂತಹ ಮತ್ತೊಂದು ಆಂದೋಲನವನ್ನು ಶೀಘ್ರದಲ್ಲೇ ದೇಶಾದ್ಯಂತ ಪ್ರಾರಂಭಿಸಲಾಗುವುದು ಎಂದು ಚಂದ್ರಶೇಖರ್ ರಾವ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com