ಪಂಜಾಬ್: ಫರೀದ್‌ಕೋಟ್‌ ನಲ್ಲಿ ಡೇರಾ ಅನುಯಾಯಿಗೆ ಗುಂಡಿಕ್ಕಿ ಹತ್ಯೆ, ಘಟನೆ ಸಿಸಿಟಿವಿಯಲ್ಲಿ ಸೆರೆ

ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯಲ್ಲಿ 2015ರ ಧರ್ಮ ನಿಂದನೆ ಪ್ರಕರಣದ ಆರೋಪಿ ಹಾಗೂ ಡೇರಾ ಸಚ್ಚಾ ಸೌದಾ ಅನುಯಾಯಿಯೊಬ್ಬರ ಮೇಲೆ ಗುರುವಾರ ಐವರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ...
ಸಿಸಿಟಿವಿ ದೃಶ್ಯ
ಸಿಸಿಟಿವಿ ದೃಶ್ಯ

ಚಂಡೀಗಢ: ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯಲ್ಲಿ 2015ರ ಧರ್ಮ ನಿಂದನೆ ಪ್ರಕರಣದ ಆರೋಪಿ ಹಾಗೂ ಡೇರಾ ಸಚ್ಚಾ ಸೌದಾ ಅನುಯಾಯಿಯೊಬ್ಬರ ಮೇಲೆ ಗುರುವಾರ ಐವರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಫರೀದ್‌ಕೋಟ್‌ನ ಕೊಟ್ಕಾಪುರದಲ್ಲಿ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಡೇರಾ ಅನುಯಾಯಿ ಪರ್ದೀಪ್ ಸಿಂಗ್ ಅವರ ಡೈರಿ ಅಂಗಡಿಯಲ್ಲಿ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಅವರ ಭದ್ರತಾ ಸಿಬ್ಬಂದಿ ಮತ್ತು ಇನ್ನೊಬ್ಬ ವ್ಯಕ್ತಿಯೂ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಭೀಕರ ಗುಂಡಿನ ದಾಳಿಯ ದೃಶ್ಯ ಸಮೀಪದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದ್ವಿಚಕ್ರವಾಹನದಲ್ಲಿ ಬಂದ ಐವರು ದಾಳಿಕೋರರಲ್ಲಿ ಇಬ್ಬರು ಪರ್ದೀಪ್ ಸಿಂಗ್ ಅವರ ಅಂಗಡಿಗೆ ನುಗ್ಗಿ ಅವರ ಮೇಲೆ ಗುಂಡು ಹಾರಿಸಿದ್ದಾರೆ.

ಅವರು ಅಂಗಡಿಯಿಂದ ಹೊರಗೆ ಓಡಿಹೋದ ನಂತರ, ಹೊರಗೆ ಕಾಯುತ್ತಿದ್ದ ಇತರ ಮೂವರು ಸಹ ಗುಂಡಿನ ದಾಳಿ ನಡೆಸಿದರು. ಘಟನೆಯಲ್ಲಿ ಹಲವು ಬಾರಿ ಗುಂಡು ಹಾರಿಸಲಾಗಿದೆ. ಕೃತ್ಯ ಎಸಗಿದ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 2015 ರಲ್ಲಿ ಬುರ್ಜ್ ಜವಾಹರ್ ಸಿಂಗ್ ವಾಲಾ ಗ್ರಾಮದ ಗುರುದ್ವಾರದಿಂದ ಗುರು ಗ್ರಂಥ ಸಾಹಿಬ್‌ನ ಪವಿತ್ರ ಪುಸ್ತಕ ನಾಪತ್ತೆಯಾಗಿತ್ತು. ಈ ಪವಿತ್ರ ಪುಸ್ತಕ ಕಳ್ಳತನ ಪ್ರಕರಣದಲ್ಲಿ ಮತ್ತು ಸಿಖ್ ಪವಿತ್ರ ಪುಸ್ತಕ ಹರಿದ ಹಾಕಿದ ಪ್ರಕರಣದಲ್ಲಿ ಪರ್ದೀಪ್ ಸಿಂಗ್ ಆರೋಪಿಯಾಗಿದ್ದರು. ಸದ್ಯ ಜಾಮೀನಿನ ಮೇಲಿದ್ದರು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿ(ಕಾನೂನು ಮತ್ತು ಸುವ್ಯವಸ್ಥೆ) ಅರ್ಪಿತ್ ಶುಕ್ಲಾ ಮತ್ತು ಪೊಲೀಸ್ ಮಹಾನಿರೀಕ್ಷಕ(ಫರೀದ್‌ಕೋಟ್ ರೇಂಜ್) ಪ್ರದೀಪ್ ಕುಮಾರ್ ಯಾದವ್ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಅಪರಾಧ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com