ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ: 68 ಕ್ಷೇತ್ರಗಳಿಗೆ ಮತದಾನ ಆರಂಭ, 412 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

ಪರ್ವತ ರಾಜ್ಯ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಮತದಾನ ಇಂದು ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. 68 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ. 
ಮತಗಟ್ಟೆಗಳಲ್ಲಿ ಆರಂಭಗೊಂಡ ಮತದಾನ
ಮತಗಟ್ಟೆಗಳಲ್ಲಿ ಆರಂಭಗೊಂಡ ಮತದಾನ

ಶಿಮ್ಲಾ: ಪರ್ವತ ರಾಜ್ಯ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಮತದಾನ ಇಂದು ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. 68 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ. 

ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್, ಎಎಪಿ ಮತ್ತು ಇತರ ಪಕ್ಷಗಳ ಭವಿಷ್ಯ ಇಂದು ಮತಯಂತ್ರಗಳಲ್ಲಿ ಮತದಾರರು ಹಾಕುವ ಮತಗಳ ಮೇಲೆ ನಿರ್ಧಾರವಾಗಲಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ, ಕಾಂಗ್ರೆಸ್, ಎಎಪಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇಂದು ಸಾಯಂಕಾಲ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆ ಮುಂದುವರಿಯಲಿದೆ. 

ಚುನಾವಣಾ ಆಯೋಗದ ಪ್ರಕಾರ, ಒಟ್ಟು 55,92,828 ಮತದಾರರಲ್ಲಿ 27,37,845 ಮಹಿಳೆಯರು, 28,54,945 ಪುರುಷರು ಮತ್ತು 38 ತೃತೀಯಲಿಂಗಿಗಳು, 412 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಈ ಬಾರಿ 24 ಮಹಿಳಾ ಅಭ್ಯರ್ಥಿಗಳಿದ್ದಾರೆ. 

ವ್ಯಾಪಕ ಭದ್ರತೆ: ಮತದಾನ ವೇಳೆ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತ ಮತದಾನ ನಡೆಸಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) 67 ಕಂಪನಿಗಳು ಮತ್ತು 11,500 ಕ್ಕೂ ಹೆಚ್ಚು ರಾಜ್ಯ ಪೊಲೀಸ್ ಸಿಬ್ಬಂದಿ ಸೇರಿದಂತೆ ಸುಮಾರು 30,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸುಮಾರು 50 ಸಾವಿರ ಸರ್ಕಾರಿ ನೌಕರರು ಚುನಾವಣಾ ಕರ್ತವ್ಯದಲ್ಲಿದ್ದಾರೆ. 

ಮತಗಟ್ಟೆಗಳು: 7,881 ಮತಗಟ್ಟೆಗಳಲ್ಲಿ 981 ನಿರ್ಣಾಯಕ ಮತ್ತು 901 ದುರ್ಬಲ ಮತಗಟ್ಟೆಗಳು ಎಂದು ವರ್ಗೀಕರಿಸಲಾಗಿದೆ. ಕಾಂಗ್ರಾ ಜಿಲ್ಲೆಯಲ್ಲಿ ಗರಿಷ್ಠ 1,625 ಮತಗಟ್ಟೆಗಳಿದ್ದರೆ, ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿ ಅತಿ ಕಡಿಮೆ 92, ಗ್ರಾಮೀಣ ಪ್ರದೇಶದಲ್ಲಿ 7,235 ಮತ್ತು ನಗರ ಪ್ರದೇಶಗಳಲ್ಲಿ 646 ಮತಗಟ್ಟೆಗಳಿವೆ. ಅಲ್ಲದೆ, ಸಿಧ್ಬರಿ (ಧರ್ಮಶಾಲಾ), ಬಾರಾ ಭಂಗಲ್ (ಬೈಜ್ನಾಥ್) ಮತ್ತು ಧಿಲ್ಲೋನ್ (ಕಸೌಲಿ) ನಲ್ಲಿ ಮೂರು ಸಹಾಯಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 

ಆಡಳಿತ ಪಕ್ಷದಿಂದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಭರ್ಜರಿ ಪ್ರಚಾರ ಮಾಡಿದರು. ಕಾಂಗ್ರೆಸ್‌ನಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಸ್ತುತ ಭಾರತ್ ಜೋಡೋ ಯಾತ್ರೆಯಲ್ಲಿರುವ ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಅವರ ಅನುಪಸ್ಥಿತಿಯಲ್ಲಿ ಪ್ರಚಾರ ನಡೆಸಿದ್ದಾರೆ. ಎಎಪಿ ಪರ ಪ್ರಚಾರವನ್ನು ಅದರ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಮುನ್ನಡೆಸಿದರು.

ತ್ರಿಕೋಣ ಸ್ಪರ್ಧೆ: ರಾಜ್ಯದ 68 ಅಸೆಂಬ್ಲಿ ಕ್ಷೇತ್ರಗಳ ಪೈಕಿ 2017ರ ಚುನಾವಣೆಯಲ್ಲಿ ಬಹುತೇಕ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಕಾಂಗ್ರೆಸ್ ಕಳೆದ ಬಾರಿ ಕೇವಲ 21 ಸ್ಥಾನಗಳನ್ನು ಪಡೆದಿತ್ತು. 

ಈ ಬಾರಿ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ನಡುವೆ ತ್ರಿಕೋನ ಸ್ಪರ್ಧೆಯನ್ನು ಕಂಡಿದೆ. ಆದರೆ ಈ ಬಾರಿ ಎಎಪಿ ಪ್ರವೇಶದಿಂದ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರಗೊಳ್ಳಬಹುದು. ಈ ಮೂರು ಪಕ್ಷಗಳ ಹೊರತಾಗಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐಎಂ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ರಾಷ್ಟ್ರೀಯ ದೇವಭೂಮಿ ಪಕ್ಷ (ಆರ್‌ಡಿಪಿ) ಚುನಾವಣೆಯಲ್ಲಿ ಸ್ಪರ್ಧಿಸುವ ಇತರ ಪಕ್ಷಗಳು. ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಎಲ್ಲಾ 68 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಸಿಪಿಐಎಂ 11, ಸಿಪಿಐ 1, ಬಿಎಸ್‌ಪಿ 53 ಮತ್ತು ಆರ್‌ಡಿಪಿ 29 ರಲ್ಲಿ ಸ್ಪರ್ಧಿಸುತ್ತಿವೆ.

ಮತದಾರರಲ್ಲಿ ಪ್ರಧಾನಿ ಮೋದಿ ಮನವಿ: ಹಿಮಾಚಲ ಪ್ರದೇಶದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ತೆರಳಿ ತಮ್ಮ ಮತದಾನದ ಹಕ್ಕು ಚಲಾಯಿಸುವಂತೆ, ಪ್ರಜಾಪ್ರಭುತ್ವ ಹಬ್ಬದಲ್ಲಿ ಜನರು ಉತ್ಸಾಹದಿಂದ ಭಾಗವಹಿಸಿ, ದಾಖಲೆ ಪ್ರಮಾಣದಲ್ಲಿ ಮತದಾನ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com