ಮರಾಠಿ ಚಿತ್ರ ಹರ್ ಹರ್ ಮಹಾದೇವ್ ಕುರಿತು ಗಲಾಟೆ: NCP ನಾಯಕ ಜಿತೇಂದ್ರ ಅವ್ಹಾದ್ ಬಂಧನ!

ಮರಾಠಿ ಚಿತ್ರ ಹರ್ ಹರ್ ಮಹಾದೇವ್ ವಿವಾದದ ನಡುವೆಯೇ ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಅವರನ್ನು ಬಂಧಿಸಲಾಗಿದೆ. 
ಜಿತೇಂದ್ರ ಅವ್ಹಾದ್-ಚಿತ್ರದ ಸ್ಟಿಲ್
ಜಿತೇಂದ್ರ ಅವ್ಹಾದ್-ಚಿತ್ರದ ಸ್ಟಿಲ್

ಮುಂಬೈ: ಮರಾಠಿ ಚಿತ್ರ ಹರ್ ಹರ್ ಮಹಾದೇವ್ ವಿವಾದದ ನಡುವೆಯೇ ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಅವರನ್ನು ಬಂಧಿಸಲಾಗಿದೆ. 

ಥಾಣೆಯ ಮಾಲ್‌ನಲ್ಲಿ ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಿದ ಆರೋಪದ ಜಿತೇಂದ್ರ ಅವ್ಹಾದ್ ಹಾಗೂ ಒಂಬತ್ತು ಕಾರ್ಯಕರ್ತರನ್ನು ಥಾಣೆಯ ವರ್ತಕನಗರ ಪೊಲೀಸರು ಬಂಧಿಸಿದ್ದಾರೆ. ಥಾಣೆಯ ಮಾಲ್‌ನಲ್ಲಿ ಹರ್ ಹರ್ ಮಹಾದೇವ್ ಚಿತ್ರದ ಪ್ರದರ್ಶನವನ್ನು ಜಿತೇಂದ್ರ ಅವ್ಹಾದ್ ನಿಲ್ಲಿಸಿದ್ದರು. ಈ ವೇಳೆ ಅಲ್ಲಿದ್ದ ಜನರು ಹಾಗೂ ಎನ್‌ಸಿಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂಬಂಧ ಥಾಣೆ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದರು.

'ನಾನು ಮುಂಬೈಗೆ ಹೋಗುತ್ತಿದ್ದೆ, ಆ ಸಮಯದಲ್ಲಿ ಪೊಲೀಸರಿಂದ ಕರೆ ಬಂದ ನಂತರ ನಾನೇ ಥಾಣೆಯ ವರ್ತಕನಗರ ಪೊಲೀಸ್ ಠಾಣೆಗೆ ತೆರಳಿದೆ ಎಂದು ಜಿತೇಂದ್ರ ಅವ್ಹಾದ್ ತಿಳಿಸಿದ್ದಾರೆ. ಇದಾದ ನಂತರ ಪೊಲೀಸ್ ಇನ್ಸ್‌ಪೆಕ್ಟರ್ ನನ್ನೊಂದಿಗೆ ಮಾತುಕತೆ ನಡೆಸಿದರು. ನಂತರ ಡಿಸಿಪಿ ರಾಥೋಡ್ ಠಾಣೆಗೆ ಆಗಮಿಸಿ ನನ್ನನ್ನು ವಶಕ್ಕೆ ತೆಗೆದುಕೊಂಡರು ಎಂದರು.

ಥಾಣೆಯ ಮಾಲ್‌ನಲ್ಲಿ ಚಿತ್ರ ಪ್ರದರ್ಶನದ ವೇಳೆ ಗಲಾಟೆ ಸೃಷ್ಟಿಸಿದ್ದಕ್ಕಾಗಿ ಜಿತೇಂದ್ರ ಅವ್ಹಾದ್ ಮತ್ತು ಸುಮಾರು 100 ಎನ್‌ಸಿಪಿ ಕಾರ್ಯಕರ್ತರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 141, 143, 146, 149, 323, 504ರ ಅಡಿಯಲ್ಲಿ ವರ್ತಕ್ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಮರಾಠಿ ಚಿತ್ರ 'ಹರ್ ಹರ್ ಮಹಾದೇವ್' ವಿರುದ್ಧ ಮಹಾರಾಷ್ಟ್ರದ ಪುಣೆಯಿಂದ ಥಾಣೆವರೆಗೆ ಪ್ರತಿಭಟನೆ ನಡೆಯುತ್ತಿವೆ. ಪುಣೆಯಲ್ಲಿ ನಡೆದ ಚಿತ್ರ ಪ್ರದರ್ಶನದಲ್ಲಿ ಮರಾಠಾ ಸಂಘಟನೆಯ ಸದಸ್ಯರು ಗಲಾಟೆ ಸೃಷ್ಟಿಸಿದ್ದಾರೆ. ಹರ್ ಹರ್ ಮಹಾದೇವ್ ಮರಾಠಿ ಭಾಷೆಯ ಐತಿಹಾಸಿಕ ಸಾಹಸಮಯ ಚಿತ್ರವಾಗಿದ್ದು, ಅಭಿಜಿತ್ ದೇಶಪಾಂಡೆ ಬರೆದು ನಿರ್ದೇಶಿಸಿದ್ದಾರೆ. ಸುಬೋಧ್ ಭಾವೆ, ಶರದ್ ಕೇಳ್ಕರ್, ಅಮೃತಾ ಖಾನ್ವಿಲಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜನ ಪಾತ್ರದಲ್ಲಿ ಸುಬೋಧ್ ಭಾವೆ ನಟಿಸಿದ್ದರೆ, ಶರದ್ ಕೇಳ್ಕರ್ ಬಾಜಿ ಪ್ರಭು ದೇಶಪಾಂಡೆ ಪಾತ್ರದಲ್ಲಿ ನಟಿಸಿದ್ದಾರೆ.

'ಹರ್ ಹರ್ ಮಹಾದೇವ್' ಚಿತ್ರದ ಕಥೆಯ ಕೇಂದ್ರಬಿಂದು ಬಾಜಿ ಪ್ರಭು ದೇಶಪಾಂಡೆ. ಅವರು ಶಿವಾಜಿ ಮಹಾರಾಜರ ಕಮಾಂಡರ್ ಆಗಿದ್ದರು. ಬಾಜಿ ಪ್ರಭು 300 ಸೈನಿಕರ ಸೈನ್ಯದೊಂದಿಗೆ 12 ಸಾವಿರ ಬಿಜಾಪುರಿ ಸೈನಿಕರೊಂದಿಗೆ ಯುದ್ಧ ಮಾಡಿದ. ಚಿತ್ರಕ್ಕೆ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಚಿತ್ರದ ಕಥೆಯ ಬಗ್ಗೆ ವಿವಾದವಿದೆ. ಇತಿಹಾಸವನ್ನು ತಿರುಚಿ ಚಿತ್ರದ ಸ್ಕ್ರಿಪ್ಟ್ ಬರೆಯಲಾಗಿದೆ ಎಂಬ ಆರೋಪವಿದೆ. ಚಿತ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ಅವರನ್ನು ತಮ್ಮ ಮಡಿಲಲ್ಲಿ ಹೊತ್ತುಕೊಂಡಿರುವುದನ್ನು ತೋರಿಸಲಾಗಿದೆ ಎಂದು ಸಂಭಾಜಿ ಬ್ರಿಗೇಡ್ ಆರೋಪಿಸಿದೆ. ಶಿವಾಜಿ ಮಹಾರಾಜ್ ಮತ್ತು ಬಾಜಿ ಪ್ರಭು ದೇಶಪಾಂಡೆ ಅವರ ಬಗ್ಗೆ ತೋರಿಸಿರುವುದು ಇತಿಹಾಸದ ಪ್ರಕಾರ ಅಲ್ಲ ಎಂದು ಚಿತ್ರವನ್ನು ವಿರೋಧಿಸುವ ಗುಂಪು ಹೇಳುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com