ಜಾಮೀನು ನೀಡದಂತೆ ಜಿಲ್ಲಾ ನ್ಯಾಯಾಧೀಶರನ್ನು "ಭಯದ ಭಾವನೆ" ತಡೆಯುತ್ತಿದೆ: ಸಿಜೆಐ

ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಜಿಲ್ಲಾ ನ್ಯಾಯಾಂಗದ ಮೇಲೆ ಭರವಸೆ ಇಡುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಡಿವೈ ಚಂದ್ರಚೂಡ್
ಡಿವೈ ಚಂದ್ರಚೂಡ್

ನವದೆಹಲಿ: ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಜಿಲ್ಲಾ ನ್ಯಾಯಾಂಗದ ಮೇಲೆ ಭರವಸೆ ಇಡುವ ಅಗತ್ಯವನ್ನು ಒತ್ತಿ ಹೇಳಿದ್ದು, ನ್ಯಾಯಾಂಗದ ನೆರವು ಬಯಸುವ ಜನಸಾಮಾನ್ಯರಿಗೆ ಜಿಲ್ಲಾ ನ್ಯಾಯಾಲಯಗಳು ಉತ್ತರ ನೀಡುತ್ತದೆ ಎಂದು ಹೇಳಿದ್ದಾರೆ. 

ರಾಷ್ಟ್ರೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳಂತೆಯೇ ಜಿಲ್ಲಾ ಕೋರ್ಟ್ ಗಳು ಮಹತ್ವದ ಪಾತ್ರ ವಹಿಸುತ್ತದೆ ಎಂದು ನ್ಯಾ.ಡಿವೈ ಚಂದ್ರಚೂಡ್ ಹೇಳಿದ್ದಾರೆ. 

ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ, ನ್ಯಾಯಾಂಗ, ಜಿಲ್ಲಾ ನ್ಯಾಯಾಂಗ, ನ್ಯಾಯಾಂಗ ಮೂಲಸೌಕರ್ಯ, ಕಾನೂನು ಶಿಕ್ಷಣ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರು, ನ್ಯಾಯಾಂಗದಲ್ಲಿ ತಂತ್ರಜ್ಞಾನ ವಿಷಯಗಳ ಬಗ್ಗೆ ಮಾತನಾಡಿದರು. 

ಉನ್ನತ ನ್ಯಾಯಾಂಗದಲ್ಲಿ ಜಾಮೀನು ವಿಚಾರಗಳು ಹೆಚ್ಚು ಮೇಲ್ಮನವಿಗೆ ಬರುತ್ತವೆ.  ತಳಮಟ್ಟದ ನ್ಯಾಯಾಲಯಗಳ ನ್ಯಾಯಾಧೀಶರು ಏಕೆ ಜಾಮೀನು ನೀಡಲು ಮುಂದಾಗುವುದಿಲ್ಲ ಎಂದರೆ ಅವರಿಗೆ ಸಾಮರ್ಥ್ಯವಿಲ್ಲ ಎಂದಲ್ಲ, ಅಥವಾ ಅವರಿಗೆ ಅಪರಾಧ ಅರ್ಥವಾಗುವುದಿಲ್ಲ ಎಂದಲ್ಲ. ಆದರೆ ಜಾಮೀನು ನೀಡಿದರೆ, ಇಂತಹ ಹೀನ ಕೃತ್ಯದ ಪ್ರಕರಣದಲ್ಲಿ ಜಾಮೀನು ನೀಡಿದ್ದಕ್ಕಾಗಿ ನಾಳೆ ನನ್ನನ್ನು ಯಾರಾದರೂ ಟಾರ್ಗೆಟ್ ಮಾಡಬಹುದು ಎಂಬ ಭಯದಿಂದ ಜಾಮೀನು ನೀಡುತ್ತಿಲ್ಲ ಎಂದು ಸಿಜೆಐ ಹೇಳಿದ್ದಾರೆ. 

ಈ ಭಯದ ಭಾವನೆ ಬಗ್ಗೆ ಯಾರೂ ಮಾತನಾಡುವುದಿಲ್ಲ ಈ ವಿಷಯವನ್ನು ಸರಿಪಡಿಸದೇ ಇದ್ದಲ್ಲಿ ಜಿಲ್ಲಾ ಕೋರ್ಟ್ ಗಳು ಹಲ್ಲಿಲ್ಲದಂತಾಗುತ್ತವೆ ಹಾಗೂ ನಮ್ಮ ಉನ್ನತ ನ್ಯಾಯಾಲಯಗಳು ನಿಷ್ಕ್ರಿಯವಾಗುತ್ತವೆ ಎಂದು ಚಂದ್ರಚೂಡ್ ಹೇಳಿದ್ದಾರೆ. 

ಪ್ರಜೆಯೊಬ್ಬನಿಗೆ ರಿಲೀಫ್  ನೀಡುವವರನ್ನು ಯಾರಾದರೂ ಏಕೆ ಅಪನಂಬಿಕೆಯಿಂದ ನೋಡಬೇಕು ಎಂದು ಸಿಜೆಐ ಪ್ರಶ್ನಿಸಿದ್ದು, ಜಿಲ್ಲಾ ನ್ಯಾಯಾಲಯಗಳನ್ನು ಸುಧಾರಿಸುವುದಕ್ಕೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com