ತಂದೆಯಿಂದಲೇ ಗುಂಡಿಗೆ ಬಲಿಯಾದ ಆಯುಷಿ! ಸೂಟ್ ಕೇಸ್ ನಲ್ಲಿ ಮೃತದೇಹ ತುಂಬಲು ತಾಯಿ ನೆರವು!

ಕಳೆದ ಶುಕ್ರವಾರ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ ವೇ ಸರ್ವಿಸ್ ರಸ್ತೆಯಲ್ಲಿ ಟ್ರಾಲಿ ಬ್ಯಾಗ್‌ ವೊಂದರಲ್ಲಿ  25 ವರ್ಷದ ಆಯುಷಿ ಚೌಧರಿ ಅವರ ಮೃತದೇಹ ಪತ್ತೆಯಾಗಿತ್ತು. ಇದು ಮರ್ಯಾದಾ ಹತ್ಯೆಯಿಂದಾಗಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ  ಉತ್ತರ ಪ್ರದೇಶ ಪೊಲೀಸರು ಸೋಮವಾರ ಆಕೆಯ ಪೋಷಕರನ್ನು ಮಥುರಾದಲ್ಲಿ ಬಂಧಿಸಿದ್ದಾರೆ.
25 ವರ್ಷದ ಆಯುಷಿ ಚೌಧರಿ
25 ವರ್ಷದ ಆಯುಷಿ ಚೌಧರಿ

ಲಖನೌ: ಕಳೆದ ಶುಕ್ರವಾರ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ ವೇ ಸರ್ವಿಸ್ ರಸ್ತೆಯಲ್ಲಿ ಟ್ರಾಲಿ ಬ್ಯಾಗ್‌ ವೊಂದರಲ್ಲಿ  25 ವರ್ಷದ ಆಯುಷಿ ಚೌಧರಿ ಅವರ ಮೃತದೇಹ ಪತ್ತೆಯಾಗಿತ್ತು. ಇದು ಮರ್ಯಾದಾ ಹತ್ಯೆಯಿಂದಾಗಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ  ಉತ್ತರ ಪ್ರದೇಶ ಪೊಲೀಸರು ಸೋಮವಾರ ಆಕೆಯ ಪೋಷಕರನ್ನು ಮಥುರಾದಲ್ಲಿ ಬಂಧಿಸಿದ್ದಾರೆ.

ದಕ್ಷಿಣ ದೆಹಲಿಯ ಬದರ್‌ಪುರದಲ್ಲಿ ನೆಲೆಸಿದ್ದ ಆಯುಷಿಯನ್ನು ಆಕೆಯ ತಂದೆ ನಿತೇಶ್ ಯಾದವ್ ಹತ್ಯೆಗೈದಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಆಕೆ ಬೇರೆ ಜಾತಿಯ ಹುಡುಗನನ್ನು ಮದುವೆಯಾಗಿದ್ದರಿಂದ ಹಾಗೂ ಆಕೆ ಆಗಾಗ್ಗೆ ತಡರಾತ್ರಿವರೆಗೂ ಹೊರಗೆ ಇರುತ್ತಿದ್ದರಿಂದ ಕೋಪಗೊಂಡು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಮಥುರಾ ಪೊಲೀಸ್ ಅಧೀಕ್ಷರು ತಿಳಿಸಿದ್ದಾರೆ. 

ನವೆಂಬರ್ 17 ರಂದು ಆಯುಷಿಯನ್ನು ತನ್ನ ಪರವಾನಗಿ ಪಡೆದ ಗನ್‌ನಿಂದ ಶೂಟ್ ಮಾಡಿದ ನಂತರ ಯಾದವ್ , ಶವವನ್ನು 12 ಗಂಟೆಗಳ ಕಾಲ ಮನೆಯಲ್ಲಿಯೇ ಇಟ್ಟುಕೊಂಡಿದ್ದ ಎಂದು  ಆರೋಪಿಸಲಾಗಿದೆ. ಅವನು ಮತ್ತು ಆತನ ಹೆಂಡತಿ ತಡರಾತ್ರಿಯವರೆಗೂ ಕಾದು ನಂತರ ಶವವನ್ನು ಸೂಟ್‌ಕೇಸ್‌ನಲ್ಲಿ ಪ್ಯಾಕ್ ಮಾಡಿ ಮಥುರಾದಲ್ಲಿ ಎಸೆದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ಶುಕ್ರವಾರ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇ ಬಳಿ ದೊಡ್ಡ ಕೆಂಪು ಸೂಟ್‌ಕೇಸ್‌ನಲ್ಲಿ ಪ್ಲಾಸ್ಟಿಕ್‌ನಲ್ಲಿ ಸುತ್ತಿದ ಶವ ಪತ್ತೆಯಾಗಿದೆ. ಸೂಟ್‌ಕೇಸ್ ಗಮನಿಸಿದ ಕಾರ್ಮಿಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಆಯುಷಿಯನ್ನು ಆಕೆಯ ತಂದೆ ನಿತೇಶ್ ಯಾದವ್ ಕೊಂದಿರುವುದು ಆಕೆಯ ತಾಯಿ ಮತ್ತು ಸಹೋದರನಿಗೆ ತಿಳಿದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಸೂಟ್‌ಕೇಸ್ ವಶಪಡಿಸಿಕೊಂಡ ನಂತರ, ಪೊಲೀಸರು ಫೋನ್‌  ಪತ್ತೆಹಚ್ಚುವ ಮೂಲಕ ತನಿಖೆಯನ್ನು ಪ್ರಾರಂಭಿಸಿದರು, ಸಿಸಿಟಿವಿ ದೃಶ್ಯಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಪರಿಶೀಲಿಸಿದರು ಎಂದು ಅವರು ಹೇಳಿದ್ದಾರೆ. ಆರಂಭದಲ್ಲಿ, ಆಕೆಯ ಗುರುತಿನ ಬಗ್ಗೆ ಸುಳಿವು ಇಲ್ಲದ ಯುಪಿ ಪೊಲೀಸರು ಸುಳಿವುಗಳಿಗಾಗಿ ಐದು ತಂಡಗಳನ್ನು ರಚಿಸಿದ್ದರು. ಆಕೆಯ ತಾಯಿ ಮತ್ತು ಸಹೋದರ ಅವಳನ್ನು ಗುರುತಿಸಲು ಮುಂದೆ ಬಂದಾಗ ಇದು ಬೆಳಕಿಗೆ ಬಂದಿತ್ತು. ಕರೆ  ಮಾಡಿದ ಅಪರಿಚಿತರೊಬ್ಬರು ಭಾನುವಾರ ಬೆಳಿಗ್ಗೆ ಆಕೆಯ ಗುರುತನ್ನು ಬಹಿರಂಗಪಡಿಸಿದ್ದಾರೆ.

ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿರುವ ಕೃಷಿ ಸಂಶೋಧನಾ ಸಂಸ್ಥೆಯ ಬಳಿಯ ಸರ್ವಿಸ್ ರಸ್ತೆಯಲ್ಲಿ ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ತಲೆಗೆ ಗಾಯ ಮತ್ತು ಭುಜದ ಮೇಲೆ ಗಾಯವಾಗಿತ್ತು. ಪೊಲೀಸರು ವಿಚಾರಣೆ ನಡೆಸಿದ ನಂತರ ಸಂತ್ರಸ್ತೆಯ ತಂದೆಯನ್ನು ಬಂಧಿಸಲಾಗಿದೆ. ದೆಹಲಿಯಲ್ಲಿಯೇ ನೆಲೆಸಿದ ನಿತೇಶ್ ಯಾದವ್ ಪ್ರಸ್ತುತ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಮಾರಾಟ ಮಾಡುವ ಅಂಗಡಿಯನ್ನು ನಡೆಸುತ್ತಿದ್ದಾರೆ.

ಮೃತಪಟ್ಟ ಆಯುಷಿ ಬಿಸಿಎ (ಬ್ಯಾಚುಲರ್ ಇನ್ ಕಂಪ್ಯೂಟರ್ ಅಪ್ಲಿಕೇಷನ್) ಕೋರ್ಸ್ ಓದುತ್ತಿದ್ದರು. ಆಯುಷಿ ತನ್ನ ಮನೆಯವರಿಗೆ ತಿಳಿಯದಂತೆ ಬೇರೆ ಜಾತಿಯ ಛತ್ರಪಾಲ್ ಚೌಧರಿ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಳು ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಕೊಲೆಗೆ ಬಳಸಿದ ಆಯುಧದ ಪತ್ತೆಗೆ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com