ಮೋರ್ಬಿ ಸೇತುವೆ ಕುಸಿತ ದುರಂತ: ನಿಜವಾದ ಅಪರಾಧಿಗಳು ಬಿಜೆಪಿಯೊಂದಿಗೆ ಉತ್ತಮ ನಂಟು- ರಾಹುಲ್
ಗುಜರಾತ್‌ನ ಮೊರ್ಬಿ ಪಟ್ಟಣದಲ್ಲಿ ಕಳೆದ ತಿಂಗಳು ಸಂಭವಿಸಿದ ತೂಗು ಸೇತುವೆ ಕುಸಿತದಿಂದಾದ 135 ಜನರ ಸಾವಿನ ಘಟನೆ ಹಿಂದಿರುವ ''ನಿಜವಾದ ಅಪರಾಧಿಗಳು' ಆಡಳಿತಾರೂಢ ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ.
Published: 21st November 2022 08:25 PM | Last Updated: 16th December 2022 12:38 PM | A+A A-

ರಾಹುಲ್ ಗಾಂಧಿ
ರಾಜ್ ಕೋಟ್: ಗುಜರಾತ್‌ನ ಮೊರ್ಬಿ ಪಟ್ಟಣದಲ್ಲಿ ಕಳೆದ ತಿಂಗಳು ಸಂಭವಿಸಿದ ತೂಗು ಸೇತುವೆ ಕುಸಿತದಿಂದಾದ 135 ಜನರ ಸಾವಿನ ಘಟನೆ ಹಿಂದಿರುವ ''ನಿಜವಾದ ಅಪರಾಧಿಗಳು' ಆಡಳಿತಾರೂಢ ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ.
ರಾಜ್ ಕೋಟ್ ನಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಘಟನೆ ಸ್ಥಳದಲ್ಲಿದ್ದ ವಾಚ್ ಮನ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತಾದರೂ, ನಿಜವಾದ ಅಪರಾಧಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದರು.
"ಮೋರ್ಬಿ ದುರಂತದ ಬಗ್ಗೆ ಪತ್ರಕರ್ತರು ನನ್ನನ್ನು ಕೇಳಿದಾಗ, ಸುಮಾರು 150 ಜನರು ಸಾವನ್ನಪ್ಪಿದ್ದಾರೆ ಮತ್ತು ಇದು ರಾಜಕೀಯ ವಿಷಯವಲ್ಲ ಮತ್ತು ಈ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದು ಹೇಳಿದೆ. ಆದರೆ ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಇಂದು ಉದ್ಭವಿಸುತ್ತದೆ. ಇದರ ಹಿಂದೆ ಇದ್ದವರು ಯಾರು?ಏಕೆ ಅವರ ವಿರುದ್ಧ ಎಫ್ ಐಆರ್ ದಾಖಲಾಗಿಲ್ಲ ಎಂದು ರಾಹುಲ್ ಕೇಳಿದರು.
ನಿಜವಾದ ಆರೋಪಿಗಳು ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ಅವರಿಗೆ ಏನೂ ಆಗುವುದಿಲ್ಲವೇ?ಅವರು ಕಾವಲುಗಾರನನ್ನು ಬಂಧಿಸಿ ಕಂಬಿಗಳ ಹಿಂದೆ ಹಾಕಿದರು. ಆದರೆ ನಿಜವಾದ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಸಂಸದ ಆರೋಪಿಸಿದ್ದಾರೆ.
ಡಿಸೆಂಬರ್ 1 ಮತ್ತು 5 ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಸಾಗುತ್ತಿಲ್ಲ ಎಂಬುದು ನನಗೆ ಬೇಸರವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.