ಗುಜರಾತ್ ಚುನಾವಣೆ: ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಲ್ಲ ಶಶಿ ತರೂರ್; ಪಕ್ಷದ ಹಲವು ನಾಯಕರಲ್ಲಿ ಅಸಮಾಧಾನ!

ಶಶಿ ತರೂರ್ ತಮ್ಮ ಗಮನವನ್ನು ತವರು ಕ್ಷೇತ್ರದತ್ತ ಹೆಚ್ಚು ಹರಿಸುತ್ತಿರುವುದು ಹೈಕಮಾಂಡ್ ನೊಂದಿಗಿನ ಶೀತಲ ಸಮರದಿಂದಾಗಿ ಎಂಬುದು ಹಲವರ ಅಭಿಪ್ರಾಯ. 
ಶಶಿ ತರೂರ್
ಶಶಿ ತರೂರ್

ನವದೆಹಲಿ: ಶಶಿ ತರೂರ್ ತಮ್ಮ ಗಮನವನ್ನು ತವರು ಕ್ಷೇತ್ರದತ್ತ ಹೆಚ್ಚು ಹರಿಸುತ್ತಿರುವುದು ಹೈಕಮಾಂಡ್ ನೊಂದಿಗಿನ ಶೀತಲ ಸಮರದಿಂದಾಗಿ ಎಂಬುದು ಹಲವರ ಅಭಿಪ್ರಾಯ. 

ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಗೆ ಪಕ್ಷ ಸ್ಟಾರ್ ಪ್ರಚಾರಕರ 2 ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿಯೂ ಶಶಿ ತರೂರ್ ಅವರ ಹೆಸರು ಇಲ್ಲ. ಕಾಂಗ್ರೆಸ್ ಹೈಕಮಾಂಡ್ ನ ಈ ನಡೆ ಸ್ವತಃ ಶಶಿ ತರೂರ್ ಹಾಗೂ  ಪಕ್ಷದಲ್ಲೇ ಇನ್ನೂ ಅನೇಕರಿಗೆ ಅಸಮಾಧಾನ ಮೂಡಿಸಿದೆ.

ಶಶಿ ತರೂರ್ ಗೆ ಆಪ್ತರಾಗಿರುವ ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ಗೌಪ್ಯತೆಯ ಷರತ್ತು ವಿಧಿಸಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, "ತಿರುವನಂತಪುರಂ ಸಂಸದರು ಇತ್ತೀಚಿನ ಬೆಳವಣಿಗೆಗಳಿಂದ ಅಸಮಾಧಾನಗೊಂಡಿದ್ದಾರೆ" ಎಂದು ಹೇಳಿದ್ದಾರೆ.
 
ಶಶಿ ತರೂರ್ ಅವರನ್ನು ಪಕ್ಷ ಗೌರವಯುತವಾಗಿ ನಡೆಸಿಕೊಳ್ಳಬೇಕು ಹಾಗೂ ಚುನಾವಣೆಯಲ್ಲಿ ಪ್ರಜಾಸತ್ತಾತ್ಮಕವಾಗಿ ಭಾಗಿಯಾಗಿದ್ದ ನಾಯಕರನ್ನು ಪಕ್ಷ ನಿರ್ಲಕ್ಷಿಸುವಂತಿಲ್ಲ ಎಂದೂ ಕಾಂಗ್ರೆಸ್ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲರನ್ನೂ ಒಳಗೊಳ್ಳುವ ಬದಲು ಕಾಂಗ್ರೆಸ್ ಪಕ್ಷ ತರೂರ್ ಅವರನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಈ ರೀತಿಯ ನಡೆಗಳಿಂದ ನಾಯಕತ್ವ ಪಕ್ಷವನ್ನು ದುರ್ಬಲಗೊಳಿಸುತ್ತಿದೆ. ಚುನಾವಣೆಯಲ್ಲಿ ಪ್ರಜಾಸತ್ತಾತ್ಮಕವಾಗಿ ಭಾಗಿಯಾಗಿದ್ದ ನಾಯಕರನ್ನು ಪಕ್ಷ ನಿರ್ಲಕ್ಷಿಸಬಾರದು ನಾವು ಎಲ್ಲವನ್ನೂ ಗಮನಿಸುತ್ತಿದ್ದೇವೆ ಎಂದು ಶಶಿ ತರೂರ್ ಆಪ್ತರಾಗಿರುವ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಎಚ್ಚರಿಕೆ ನೀಡಿದ್ದಾರೆ. ಶಶಿ ತರೂರ್ ಆಪ್ತ ನಾಯಕರ ಹೇಳಿಕೆಯನ್ನು ಇನ್ನೂ ನಾಲ್ಕು ಮಂದಿ ಹಿರಿಯ ಕಾಂಗ್ರೆಸ್ ನಾಯಕರು ಬೆಂಬಲಿಸಿದ್ದಾರೆ.

ಇದನ್ನೂ ಓದಿ: ಗುಜರಾತ್ ರಾಜ್ಯ ಚುನಾವಣೆ: ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ತರೂರ್‌; ಕಾರಣ ಗೊತ್ತೆ?
 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರೀಕ್ ಅನ್ವರ್, ಯಾರನ್ನು ಚುನಾವಣೆಗೆ ಸ್ಟಾರ್ ಪ್ರಚಾರಕರನ್ನಾಗಿ ನೇಮಕ ಮಾಡಬೇಕೆಂಬುದು ಪಕ್ಷದ ಅಧ್ಯಕ್ಷರಿಗೆ ಬಿಟ್ಟ ವಿಚಾರವಾಗಿದೆ. ನಾವು ಇಂಥವರನ್ನೇ ಮಾಡಿ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಪಕ್ಷದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
 
"ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪಕ್ಷವನ್ನು ಬಲಿಷ್ಠಗೊಳಿಸುವುದಾಗಿತ್ತು. ಆದರೆ ಪಕ್ಷ ತರೂರ್ ಅವರನ್ನು ನಿರ್ಲಕ್ಷ್ಯಿಸುತ್ತಾ, ಅವರಿಗೆ ಮತ ಹಾಕಿದ ನಾಯಕರಿಗೂ ಅವಮಾನ ಮಾಡುತ್ತಿದೆ" ಎಂದು ಶಶಿ ತರೂರ್ ಆಪ್ತ ಹಿರಿಯ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಖರ್ಗೆಗೆ ಪಕ್ಷ ಮುನ್ನಡೆಸಲು ಸಹಕಾರ ನೀಡುವುದಾಗಿ ಶಶಿ ತರೂರ್ ಹೇಳಿದ್ದಾರೆ. ಅದನ್ನು ಶ್ಲಾಘಿಸಬೇಕು, ನಾವೆಲ್ಲರೂ ಪಕ್ಷವನ್ನು ಬಲಿಷ್ಠಗೊಳಿಸುವುದಕ್ಕೆ ಬದ್ಧರಾಗಿದ್ಡೆವೆ. ಅವರ ಬೆಳವಣಿಗೆಯನ್ನು ಸಹಿಸದ ಕೆಲವರು, ಸ್ಟಾರ್ ಪ್ರಚಾರಕನ ಪಟ್ಟಿಯಿಂದ ಹೊರಗೆ ಇಡುವ ನಡೆಯ ಹಿಂದಿದ್ದಾರೆ. ಈಗಲೂ ಗಾಂಧಿ ಪರಿವಾರದ ಸುತ್ತ ಇರುವ ಕೂಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಮತ್ತೋರ್ವ ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ. ಇನ್ನು ಶಶಿ ತರೂರ್ ಗೆ ತಮ್ಮ ತವರಿನ ಕಾಂಗ್ರೆಸ್ ನಾಯಕರೂ ಹೆಚ್ಚಾಗಿ ಸ್ಪಂದಿಸುಲ್ಲ ಎಂಬ ಆರೋಪಗಳು ಕೇಳಿಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com