ಶ್ರದ್ಧಾ ವಾಲ್ಕರ್ ಮರ್ಡರ್ ಕೇಸು: ಇಂದು ಆರೋಪಿ ಆಫ್ತಾಬ್ ಗೆ ಪಾಲಿಗ್ರಾಫ್ ಪರೀಕ್ಷೆ

27 ವರ್ಷದ ಯುವತಿ ಶ್ರದ್ಧಾ ವಾಲ್ಕರ್ ಹತ್ಯೆ ಕೇಸಿನ ಆರೋಪಿ 28 ವರ್ಷದ ಯುವಕ ಅಫ್ತಾಬ್ ಅಮೀನ್ ಪೂನಾವಾಲಗೆ ಇಂದು ಬುಧವಾರ ಪಾಲಿಗ್ರಾಫ್ ಪರೀಕ್ಷೆ ನಡೆಸುವ ಸಾಧ್ಯತೆಯಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಅಫ್ತಾಬ್ ಅಮೀನ್ ಪೂನಾವಾಲ
ಅಫ್ತಾಬ್ ಅಮೀನ್ ಪೂನಾವಾಲ

ನವದೆಹಲಿ: 27 ವರ್ಷದ ಯುವತಿ ಶ್ರದ್ಧಾ ವಾಲ್ಕರ್ ಹತ್ಯೆ ಕೇಸಿನ ಆರೋಪಿ 28 ವರ್ಷದ ಯುವಕ ಅಫ್ತಾಬ್ ಅಮೀನ್ ಪೂನಾವಾಲಗೆ ಇಂದು ಬುಧವಾರ ಪಾಲಿಗ್ರಾಫ್ ಪರೀಕ್ಷೆ ನಡೆಸುವ ಸಾಧ್ಯತೆಯಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.

ಪಾಲಿಗ್ರಾಫ್ ಪರೀಕ್ಷೆಗೆ ಅಫ್ತಾಬ್ ನನ್ನು ಒಳಪಡಿಸಲು ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು ಇಂದು ದೆಹಲಿಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆಯಲಿದೆ ಎಂದು ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿವೆ.

ನಿನ್ನೆ ದೆಹಲಿಯ ಸ್ಥಳೀಯ ನ್ಯಾಯಾಲಯವು ಅಫ್ತಾಬ್ ನ ಪೊಲೀಸ್ ಕಸ್ಟಡಿ ಅವಧಿಯನ್ನು ಇನ್ನೂ ನಾಲ್ಕು ದಿನಗಳ ಕಾಲ ಮುಂದೂಡಿದೆ. ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಿಲ್ಲ ಎಂಬ ಕಾರಣಕ್ಕೆ ವಿಸ್ತರಿಸಲಾಗಿದೆ. ಆರೋಪಿ ಮತ್ತು ಸಂತ್ರಸ್ತೆ ಶ್ರದ್ಧಾ ಒಟ್ಟಿಗೆ ವಾಸಿಸುತ್ತಿದ್ದ ದೆಹಲಿಯ ಮೆಹ್ರಾಲಿ ಫ್ಲಾಟ್‌ನಿಂದ ನಕ್ಷೆಯಂತಹ ಕೆಲವು ನಿರ್ಣಾಯಕ ಪುರಾವೆಗಳನ್ನು ಪೊಲೀಸರು ಇತ್ತೀಚೆಗೆ ಕಂಡುಕೊಂಡಿದ್ದಾರೆ. ಮುಂದಿನ ಶೋಧ ಕಾರ್ಯಕ್ಕೆ ಈ ನಕ್ಷೆ ನೆರವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಅಫ್ತಾಬ್ ವಿಚಾರಣೆಯ ಸಮಯದಲ್ಲಿ ಆತ ವಂಚಕ ಸ್ವಭಾವದವನಾಗಿದ್ದು, ವಿಚಾರಣೆ ಸಂದರ್ಭದಲ್ಲಿ ದಾರಿತಪ್ಪಿಸಲು ಹಲವು ಬಾರಿ ಪ್ರಯತ್ನಿಸಿದ್ದರಿಂದ ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ಪಾಲಿಗ್ರಾಫ್ ಮತ್ತು ನಾರ್ಕೋ ಪರೀಕ್ಷೆ ಅತ್ಯಗತ್ಯ ಎಂದು ದೆಹಲಿ ಪೊಲೀಸ್ ಮೂಲಗಳು ಹಲವು ಬಾರಿ ಸ್ಪಷ್ಟಪಡಿಸಿವೆ. ಮಹಿಳೆಯ ಕೊಲೆಯನ್ನು ಕೋಪದ ಭರದಲ್ಲಿ ಮಾಡಲಾಗಿಲ್ಲ, ಮೂರ್ಖತನದಿಂದ ಯೋಜಿಸಿ ಕುಕೃತ್ಯವೆಸಗಲಾಗಿದೆ. ಅಫ್ತಾಬ್ ಪ್ರತಿ ಪ್ರಶ್ನೆಗೆ ಇಂಗ್ಲಿಷ್ ನಲ್ಲಿ ಚೆನ್ನಾಗಿ ಉತ್ತರಿಸುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಏನಿದು ಪಾಲಿಗ್ರಫಿ ಪರೀಕ್ಷೆ: ಈ ರೀತಿಯ ಪ್ರಕರಣದಲ್ಲಿ ಸುಳ್ಳು ಪತ್ತೆಹಚ್ಚುವ ಪರೀಕ್ಷೆಯಾಗಿದ್ದು, ಪರೀಕ್ಷೆಗೊಳಪಡುವ ವ್ಯಕ್ತಿಯು ಹಲವು ಪ್ರಶ್ನೆಗಳಿಗೆ ಉತ್ತರಿಸುವಾಗ ರಕ್ತದೊತ್ತಡ, ನಾಡಿ ಮತ್ತು ಉಸಿರಾಟಗಳನ್ನು ದಾಖಲಿಸಲಾಗುತ್ತದೆ. ಕೆಲವು ಪ್ರಾಥಮಿಕ ಮಾಹಿತಿಯನ್ನು ಪಡೆಯಲು ನಿರ್ಣಾಯಕ ಪ್ರಶ್ನೆಗಳನ್ನು ಪೊಲೀಸರು ಆರೋಪಿಯಿಂದ ಕೇಳುತ್ತಾರೆ. ದೆಹಲಿಯ ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಆರೋಪಿ ಅಫ್ತಾಬ್ ಮೇಲೆ ಪರೀಕ್ಷೆ ನಡೆಸಲಾಗುತ್ತದೆ. 

ದೆಹಲಿ ಪೊಲೀಸ್ ತನಿಖಾಧಿಕಾರಿಗಳು ಸಿದ್ಧಪಡಿಸಿದ ಪ್ರಶ್ನಾವಳಿಯನ್ನು ಕೇಳಲಾಗುವ ಮುಖ್ಯ ಪಾಲಿಗ್ರಾಫ್ ಪರೀಕ್ಷೆಯನ್ನು ಇಂದು ನಡೆಸಲಾಗುತ್ತದೆ. ಪಾಲಿಗ್ರಾಫ್ ಪರೀಕ್ಷೆಯ ನಂತರ, ದೆಹಲಿ ಪೊಲೀಸರು ಆರೋಪಿಯ 4 ದಿನಗಳ ಪೊಲೀಸ್ ಕಸ್ಟಡಿಗೆ ಮುಂಚಿತವಾಗಿ ನಾರ್ಕೋ ಪರೀಕ್ಷೆಯನ್ನು ನಡೆಸುತ್ತಾರೆ.

ಅಫ್ತಾಬ್ ನ ಕುಟುಂಬಸ್ಥರು ದೆಹಲಿಯಲ್ಲಿ: ಇನ್ನು ಈ ಪ್ರಕರಣ ಬೆಳಕಿಗೆ ಬಂದಾಗಿನಿಂದ ಆರೋಪಿ ಅಫ್ತಾಬ್ ನ ಕುಟುಂಬಸ್ಥರು ಎಲ್ಲಿ ನೆಲೆಸಿದ್ದಾರೆ, ಯಾರ್ಯಾರಿದ್ದಾರೆ ಎಂಬ ಅನುಮಾನ, ಪ್ರಶ್ನೆಗಳು ಕಾಡುತ್ತಿದ್ದವು. ಈಗ ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಆತನ ಕುಟುಂಬಸ್ಥರು ದೆಹಲಿಯಲ್ಲಿದ್ದಾರೆ. ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಕುಟುಂಬಸ್ಥರ ಮಾಹಿತಿ ಸಿಕ್ಕಿರುವ ಆಧಾರದ ಮೇಲೆ ಅವರನ್ನು ಮತ್ತೆ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ. ತನ್ನನ್ನು ಹತ್ಯೆ ಮಾಡಲು ಸಂಗಾತಿ ಅಫ್ತಾಬ್ ನೋಡುತ್ತಿದ್ದಾನೆ ಎಂದು ಆತನ ಕುಟುಂಬಸ್ಥರಿಗೆ ವಿಚಾರ ಗೊತ್ತಿದೆ ಎಂದು ಶ್ರದ್ಧಾ ವಾಲ್ಕರ್ ಮುಂಬೈಯಲ್ಲಿ 2020ರಲ್ಲಿಯೇ ದೂರು ದಾಖಲಿಸಿದ್ದಳಂತೆ ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com