ಸಚಿನ್ ಪೈಲಟ್ ಒಬ್ಬ ಗದ್ದರ್, ಸಿಎಂ ಆಗಲು ಸಾಧ್ಯವಿಲ್ಲ: ಅಶೋಕ್ ಗೆಹ್ಲೋಟ್
ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರನ್ನು "ಗದ್ದರ್" (ದೇಶದ್ರೋಹಿ) ಎಂದು ಕರೆದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, 2020 ರಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ತಮ್ಮದೇ ಸರ್ಕಾರವನ್ನು ಉರುಳಿಸಲು...
Published: 24th November 2022 06:44 PM | Last Updated: 19th December 2022 11:41 AM | A+A A-

ಅಶೋಕ್ ಗೆಹ್ಲೋಟ್
ಜೈಪುರ: ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರನ್ನು "ಗದ್ದರ್" (ನಂಬಿಕೆ ದ್ರೋಹಿ) ಎಂದು ಕರೆದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, 2020 ರಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ತಮ್ಮದೇ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದ್ದರಿಂದ ಅವರು ಸಿಎಂ ಆಗಲು ಸಾಧ್ಯವಿಲ್ಲ ಎಂದು ಗುರುವಾರ ಹೇಳಿದ್ದಾರೆ.
ಗೆಹ್ಲೋಟ್ ಅವರ ಈ ಹೇಳಿಕೆ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಾಭಿಪ್ರಾಯವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನು ಓದಿ: ಇತ್ತೀಚೆಗೆ ಬಂಡಾಯವೆದ್ದಿದ್ದ ರಾಜಸ್ಥಾನದ ಶಾಸಕರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳಲಿ: ಸಚಿನ್ ಪೈಲಟ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕೂಡ ಮರುಭೂಮಿ ರಾಜ್ಯವನ್ನು ಪ್ರವೇಶಿಸಲು ಸಜ್ಜಾಗಿದೆ. ಗುರುವಾರ ಮಧ್ಯಪ್ರದೇಶದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಸಚಿನ್ ಪೈಲಟ್ ಸಹ ಭಾಗಿಯಾಗಿದ್ದು, ಗೆಹ್ಲೋಟ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಸಚಿನ್ ಪೈಲಟ್ ಬಂಡಾಯದಲ್ಲಿ ಕೇಂದ್ರ ಗೃಹ ಸಚಿವ ಮತ್ತು ಹಿರಿಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅಮಿತ್ ಶಾ ಭಾಗಿಯಾಗಿದ್ದಾರೆ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.
ಪೈಲಟ್ ಗೆ ನಿಷ್ಠರಾಗಿರುವ ಕೆಲವು ಕಾಂಗ್ರೆಸ್ ಶಾಸಕರು ಒಂದು ತಿಂಗಳಿಗೂ ಹೆಚ್ಚು ಕಾಲ ಗುರುಗ್ರಾಮ್ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದ್ದರು ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿದ್ದರು. ಪೈಲಟ್ ಸೇರಿದಂತೆ ಪ್ರತಿಯೊಬ್ಬ ಶಾಸಕರಿಗೆ 10 ಕೋಟಿ ರೂಪಾಯಿ ಪಾವತಿಸಲಾಗಿದೆ ಎಂಬುದಕ್ಕೆ ತಮ್ಮ ಬಳಿ ಪುರಾವೆ ಇದೆ ಎಂದು ಹೇಳಿದ್ದಾರೆ.
ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವುದಾದರೆ ಹೈಕಮಾಂಡ್ ಪೈಲಟ್ ಹೊರತುಪಡಿಸಿ ರಾಜಸ್ಥಾನದ 102 ಕಾಂಗ್ರೆಸ್ ಶಾಸಕರಲ್ಲಿ ಯಾರನ್ನಾದರೂ ಸಿಎಂ ಮಾಡಬಹುದ ಎಂದು ಹಿರಿಯ ನಾಯಕ ಹೇಳಿದ್ದಾರೆ.
''ಸರ್ಕಾರದ ವಿರುದ್ಧ ಬಂಡಾಯವೆದ್ದು ಗದ್ದರ್ ಎಂದು ಬಿಂಬಿಸಿಕೊಂಡವರನ್ನು ಶಾಸಕರು ಎಂದಿಗೂ ಒಪ್ಪುವುದಿಲ್ಲ, ಅವರು ಮುಖ್ಯಮಂತ್ರಿಯಾಗುವುದು ಹೇಗೆ? ಅಂತಹ ವ್ಯಕ್ತಿಯನ್ನು ಮುಖ್ಯಮಂತ್ರಿ ಎಂದು ಶಾಸಕರು ಹೇಗೆ ಒಪ್ಪಿಕೊಳ್ಳುತ್ತಾರೆ? ತಲಾ 10 ಕೋಟಿ ರೂ.ಗಳನ್ನು ಹಂಚಿರುವ ಬಗ್ಗೆ ನನ್ನ ಬಳಿ ಪುರಾವೆ ಇದೆ ಎಂದು ಗೆಹ್ಲೋಟ್ ಎನ್‌ಡಿಟಿವಿಗೆ ತಿಳಿಸಿರುವುದಾಗಿ ವರದಿಯಾಗಿದೆ.