ಎನ್ಐಎ ಸೇರಿದಂತೆ 15 ಸಂಸ್ಥೆಗಳೊಂದಿಗೆ ಅಪರಾಧಿಗಳ ಮಾಹಿತಿ ಹಂಚಿಕೊಳ್ಳುವುದಕ್ಕೆ ಇಡಿಗೆ ಸರ್ಕಾರ ಅನುಮತಿ
ಜಾರಿ ನಿರ್ದೇಶನಾಲಯವು ಈಗ ಆರ್ಥಿಕ ಅಪರಾಧಿಗಳ ಮಾಹಿತಿಯನ್ನು ಇತರ ಸರ್ಕಾರಿ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
Published: 28th November 2022 09:05 PM | Last Updated: 28th November 2022 09:05 PM | A+A A-

ಜಾರಿ ನಿರ್ದೇಶನಾಲಯ
ನವದೆಹಲಿ: ಜಾರಿ ನಿರ್ದೇಶನಾಲಯವು ಈಗ ಆರ್ಥಿಕ ಅಪರಾಧಿಗಳ ಮಾಹಿತಿಯನ್ನು ಇತರ ಸರ್ಕಾರಿ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಎಸ್‌ಎಫ್‌ಐಒ, ಸಿಸಿಐ ಮತ್ತು ಎನ್‌ಐಎ ಸೇರಿದಂತೆ ಇನ್ನೂ 15 ಏಜೆನ್ಸಿಗಳೊಂದಿಗೆ ಆರ್ಥಿಕ ಅಪರಾಧಿಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ಸರ್ಕಾರ ಅನುಮತಿ ನೀಡಿದೆ. ಈ ಕ್ರಮವು ಕಾನೂನು ಉಲ್ಲಂಘಿಸುವವರನ್ನು ಹಿಡಿಯುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಹಣಕಾಸು ಸಚಿವಾಲಯವು ನವೆಂಬರ್ 22ರಂದು ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯ್ದೆ(ಪಿಎಂಎಲ್ಎ), 2002ರ ಬದಲಾವಣೆಗಳ ಭಾಗವಾಗಿ ಇದನ್ನು ಸೂಚಿಸಿದೆ.
ಈಗ 25 ಏಜೆನ್ಸಿಗಳಿಗೆ ಮಾಹಿತಿ
ಈಗ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಜಾರಿ ನಿರ್ದೇಶನಾಲಯವು ಒಟ್ಟು 25 ಏಜೆನ್ಸಿಗಳೊಂದಿಗೆ ಡೇಟಾವನ್ನು ಹಂಚಿಕೊಳ್ಳಬಹುದಾಗಿದೆ. ಇದರಲ್ಲಿ ಈಗಾಗಲೇ 10 ಏಜೆನ್ಸಿಗಳನ್ನು ಸೇರಿಸಲಾಗಿದೆ. ಜಾರಿ ನಿರ್ದೇಶನಾಲಯವು ಮುಖ್ಯವಾಗಿ ಮನಿ ಲಾಂಡರಿಂಗ್ ಮತ್ತು ವಿದೇಶಿ ವಿನಿಮಯ ಕಾನೂನುಗಳ ಉಲ್ಲಂಘನೆಯ ಪ್ರಕರಣಗಳ ಕುರಿತು ವ್ಯವಹರಿಸುತ್ತದೆ.
ಯಾವ ಯಾವ ಏಜೆನ್ಸಿಗಳಿಗೆ ಮಾಹಿತಿ
ರಾಷ್ಟ್ರೀಯ ತನಿಖಾ ಸಂಸ್ಥೆ(NIA), ಗಂಭೀರ ವಂಚನೆ ತನಿಖಾ ಕಚೇರಿ(SFIO), ರಾಜ್ಯ ಪೊಲೀಸ್ ಇಲಾಖೆಗಳು, ವಿವಿಧ ಕಾಯ್ದೆಗಳ ಅಡಿಯಲ್ಲಿ ನಿಯಂತ್ರಕರು, ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (DGFT), ವಿದೇಶಾಂಗ ಸಚಿವಾಲಯ ಮತ್ತು ಭಾರತ ಸ್ಪರ್ಧಾತ್ಮಕ ಆಯೋಗ(CCI). ಇದರೊಂದಿಗೆ ರಾಷ್ಟ್ರೀಯ ಗುಪ್ತಚರ ಗ್ರಿಡ್, ಕೇಂದ್ರ ವಿಜಿಲೆನ್ಸ್ ಕಮಿಷನ್ (CVC), ರಕ್ಷಣಾ ಗುಪ್ತಚರ ಸಂಸ್ಥೆ, ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ, ಮಿಲಿಟರಿ ಗುಪ್ತಚರ, ಕೇಂದ್ರ ನಾಗರಿಕ ಸೇವಾ ನಿಯಮಗಳ ಅಡಿಯಲ್ಲಿ ವಿಚಾರಣಾ ಪ್ರಾಧಿಕಾರ ಮತ್ತು ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದೆ.
ಈ ಮೊದಲು 10 ಏಜೆನ್ಸಿಗಳು ಮಾಹಿತಿ ಪಡೆಯುತ್ತಿದ್ದವು
ಈ ಹಿಂದೆ ಸಿಬಿಐ, ಆರ್‌ಬಿಐ, ಸೆಬಿ, ಐಆರ್‌ಡಿಎಐ, ಇಂಟಲಿಜೆನ್ಸ್ ಬ್ಯೂರೋ ಮತ್ತು ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯುನಿಟ್ (FIU) ಸೇರಿದಂತೆ 10 ಏಜೆನ್ಸಿಗಳೊಂದಿಗೆ ಮಾತ್ರ ಡೇಟಾವನ್ನು ಹಂಚಿಕೊಳ್ಳಲು ಇಡಿಗೆ ಅನುಮತಿ ನೀಡಲಾಗಿತ್ತು. PMLA ಅಡಿಯಲ್ಲಿ ಈಗ 25 ಏಜೆನ್ಸಿಗಳೊಂದಿಗೆ ಗೌಪ್ಯ ಮಾಹಿತಿ ಮತ್ತು ವಸ್ತುಗಳನ್ನು ಹಂಚಿಕೊಳ್ಳಲು ಅಧಿಕಾರ ಹೊಂದಿದ್ದಾರೆ ಎಂದು AMRG ಮತ್ತು ಅಸೋಸಿಯೇಟ್ಸ್‌ನ ಹಿರಿಯ ಪಾಲುದಾರ ರಜತ್ ಮೋಹನ್ ಹೇಳಿದರು.