ಖರ್ಗೆ ಹೇಳಿಕೆ 'ಮಣ್ಣಿನ ಮಗ' ಮೋದಿಗೆ ಮಾಡಿದ ಅವಮಾನ; ಗುಜರಾತಿಗರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಿ: ಬಿಜೆಪಿ ನಾಯಕರ ಕರೆ
ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ರಾವಣ‘ ಎಂದು ಸಂಬೋಧಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತ ಪಡಿಸಿದೆ, ಖರ್ಗೆಯವರು ಗುಜರಾತ್‌ನ ಪುತ್ರನನ್ನು ಪದೇ ಪದೇ ಅವಮಾನಿಸುತ್ತಿದ್ದಾರೆ‘ ಎಂದು ಬಿಜೆಪಿ ಕಿಡಿಕಾರಿದೆ.
Published: 30th November 2022 09:51 AM | Last Updated: 30th November 2022 02:01 PM | A+A A-

ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ರಾವಣ‘ ಎಂದು ಸಂಬೋಧಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತ ಪಡಿಸಿದೆ, ಖರ್ಗೆಯವರು ಗುಜರಾತ್‌ನ ಪುತ್ರನನ್ನು ಪದೇ ಪದೇ ಅವಮಾನಿಸುತ್ತಿದ್ದಾರೆ‘ ಎಂದು ಬಿಜೆಪಿ ಕಿಡಿಕಾರಿದೆ.
ಮಲ್ಲಿಕಾರ್ಜುನ ಖರ್ಗೆ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪತ್ರ, ಕಾಂಗ್ರೆಸ್ ಗುಜರಾತಿಗಳನ್ನು ಅವಮಾನಿಸುತ್ತಿದೆ, “ವಿರೋಧ ಪಕ್ಷಕ್ಕೆ ಪಾಠ ಕಲಿಸಿ” ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಗುಜರಾತ್ ಚುನಾವಣೆಯ ಬಿಸಿಯನ್ನು ತಾಳಲಾಗುತ್ತಿಲ್ಲ. ಕಾಂಗ್ರೆಸ್ ಅಧ್ಯಕ್ಷ ತಮ್ಮ ಮಾತಿನ ಮೇಲೆ ಹಿಡಿತ ಕಳೆದುಕೊಂಡು, ಪ್ರಧಾನಿ ನರೇಂದ್ರ ಮೋದಿಯನ್ನು ರಾವಣ ಎಂದು ಕರೆದಿದ್ದಾರೆ. ಸಾವಿನ ವ್ಯಾಪಾರಿಯಿಂದ ಆರಂಭವಾಗಿ ಈಗ ರಾವಣ ಎಂದು ಕರೆಯುವವರೆಗೆ ಬಂದು ನಿಂತಿದೆ. ಕಾಂಗ್ರೆಸ್ ಗುಜರಾತ್‌ನ ಪುತ್ರನನ್ನು ಅವಮಾನಿಸುತ್ತಲೇ ಬಂದಿದೆ‘ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ರಾವಣನಂತೆ 100 ತಲೆಗಳಿವೆಯೇ?: ಮಲ್ಲಿಕಾರ್ಜುನ್ ಖರ್ಗೆ
ಅಹಮದಾಬಾದ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಖರ್ಗೆ, ‘ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಗಳು. ಆದರೆ ಅವರು ತಮ್ಮ ಕೆಲಸವನ್ನು ಮರೆತು ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಪ್ರತೀ ಬಾರಿಯೂ ತಮ್ಮ ಬಗ್ಗೆಯೇ ಮಾತನಾಡುತ್ತಾರೆ. ನೀವು ಯಾರನ್ನೂ ನೋಡಬೇಡಿ, ಮೋದಿಯನ್ನು ನೋಡಿ ಮತ ಹಾಕಿ ಎಂದು ಹೇಳುತ್ತಾರೆ. ಎಷ್ಟು ಬಾರಿ ನಿಮ್ಮ ಮುಖ ನೋಡಬೇಕು? ನಿಮಗೆ ಎಷ್ಟು ಅವತಾರ ಇದೆ? ನಿಮಗೇನು ರಾವಣನ ಹಾಗೆ 100 ತಲೆ ಇದೆಯೇ? ಎಂದು ಪ್ರಶ್ನಿಸಿದ್ದರು.
2007ರ ಗುಜರಾತ್ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆಯೊಂದರಲ್ಲಿ, 2002ರ ಗುಜರಾತ್ ಹಿಂಸಾಚಾರವನ್ನು ಉಲ್ಲೇಖಿಸಿ, ಅಂದಿನ ಗುಜರಾತ್ ಪ್ರಧಾನಿ ನರೇಂದ್ರ ಮೋದಿ ಅವರನ್ನು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ‘ಸಾವಿನ ವ್ಯಾಪಾರಿ‘ ಎಂದು ಟೀಕಿಸಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಹಾಗೂ 4 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8ಕ್ಕೆ ಫಲಿತಾಂಶ ಪ್ರಕಟವಾಗಲಿದೆ.