ಉಗ್ರ ಬೆಂಬಲಿತ ಪಾಕ್ ಜೊತೆ ಮಾತುಕತೆ ಇಲ್ಲ; ಜಮ್ಮು-ಕಾಶ್ಮೀರ ಜನರೊಂದಿಗೆ ಮಾತನಾಡುತ್ತೇನೆ: ಅಮಿತ್ ಶಾ

ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಿಲ್ಲ ಬದಲಿಗೆ ಜಮ್ಮು ಮತ್ತು ಕಾಶ್ಮೀರದ ಜನರ ಉನ್ನತಿಗಾಗಿ ಮಾತನಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ಬಾರಾಮುಲ್ಲಾ: ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಿಲ್ಲ ಬದಲಿಗೆ ಜಮ್ಮು ಮತ್ತು ಕಾಶ್ಮೀರದ ಜನರ ಉನ್ನತಿಗಾಗಿ ಮಾತನಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಬಾರಾಮುಲ್ಲಾದಲ್ಲಿ ತಮ್ಮ ಮೊದಲ ಬೃಹತ್ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶಾ, ಭಾರತವು ಪಾಕಿಸ್ತಾನದೊಂದಿಗೆ ಮಾತನಾಡುವುದಿಲ್ಲ ಎಂದು ಹೇಳಿದರು.

ಕೆಲವರು ನಾನು ಪಾಕಿಸ್ತಾನದೊಂದಿಗೆ ಮಾತನಾಡಲು ಸಲಹೆ ನೀಡುತ್ತಾರೆ. ಆದರೆ ನಾನು ಅವರಿಗೆ ಹೇಳಲು ಬಯಸುತ್ತೇನೆ, ಜಮ್ಮು ಮತ್ತು ಕಾಶ್ಮೀರದ ಜನರ ಪ್ರಗತಿ ಮತ್ತು ಸಮೃದ್ಧಿಗಾಗಿ ನಾವು ಮಾತುಕತೆ ನಡೆಸುತ್ತೇವೆ. ಜಮ್ಮು ಮತ್ತು ಕಾಶ್ಮೀರದಿಂದ ಭಯೋತ್ಪಾದನೆಯನ್ನು ಸಂಪೂರ್ಣ ಬಲದಿಂದ ಕಿತ್ತೊಗೆಯಲು ನರೇಂದ್ರ ಮೋದಿ ಸರ್ಕಾರ ಸಂಕಲ್ಪ ಮಾಡಿದೆ ಎಂದು ಹೇಳಿದರು.

ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬಗಳ ಮೇಲೆ ಕಟುವಾದ ದಾಳಿ ನಡೆಸಿದ ಶಾ, ಅವರು ಜನರಿಗೆ ಬಂದೂಕು ಮತ್ತು ಕಲ್ಲುಗಳನ್ನು ನೀಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸಿದರು ಎಂದು ಹೇಳಿದರು.

ಈ ಹಿಂದೆ ಮೂರು ಕುಟುಂಬಗಳು, 87 ಶಾಸಕರು ಆಡಳಿತ ನಡೆಸುತ್ತಿದ್ದರು. ಆದರೆ ಈಗ 30 ಸಾವಿರ ಜನರು ಜನರ ಅನುಕೂಲಕ್ಕಾಗಿ ವಿವಿಧ ರಂಗಗಳಲ್ಲಿ ಜೆ & ಕೆ ಪ್ರತಿನಿಧಿಸುತ್ತಿದ್ದಾರೆ. 70 ವರ್ಷಗಳಲ್ಲಿ ಪ್ರಪ್ರಥಮ ಬಾರಿಗೆ ಪ್ರಜಾಪ್ರಭುತ್ವ ಜನತೆಯನ್ನು ತಲುಪಿದೆ ಎಂದರು.

70 ವರ್ಷಗಳಲ್ಲಿ ಕೇವಲ 15000 ಕೋಟಿ ಹೂಡಿಕೆ ಇತ್ತು ಮತ್ತು ಮೂರು ವರ್ಷಗಳಲ್ಲಿ ಮೋದಿ ಸರ್ಕಾರ 56000 ಕೋಟಿ ಹೂಡಿಕೆ ಮಾಡಿದೆ.  ಕಳೆದ ಮೂರು ವರ್ಷಗಳಲ್ಲಿ ಜೆ & ಕೆ ನಲ್ಲಿ ಬಡವರಿಗೆ ಒಂದು ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.

ಈ ವರ್ಷದ ಆಗಸ್ಟ್‌ವರೆಗೆ 22 ಲಕ್ಷ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದು ದಾಖಲೆಯಾಗಿದೆ ಮತ್ತು ಕಣಿವೆಯಲ್ಲಿ ಸಮೃದ್ಧಿಯ ಹರಿವು ಮುಂದುವರಿದಿದೆ ಎಂದು ಗೃಹ ಸಚಿವರು ಹೇಳಿದರು.

ಅವರು ಬಾರಾಮುಲ್ಲಾದಲ್ಲಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದಾಗ ರ್ಯಾಲಿಗೆ ಯಾರೂ ಬರುವುದಿಲ್ಲ ಎಂದು ಹೇಳಲಾಯಿತು ಆದರೆ ಜನರು ಈ ಪ್ರದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಬಯಸುತ್ತಾರೆ ಎಂದು ಬಿಂಬಿಸಲು ಸಾವಿರಾರು ಜನರು ಇಲ್ಲಿಗೆ ಬಂದಿದ್ದಾರೆ ಎಂದು ಅವರು ಹೇಳಿದರು.

ಹತ್ತಿರದ ಮಸೀದಿಯಿಂದ 'ಆಜಾನ್'(ಮಧ್ಯಾಹ್ನ ಪ್ರಾರ್ಥನೆ ಕರೆ) ಘೋಷಿಸಿದಾಗ ಷಾ ತಮ್ಮ ಭಾಷಣವನ್ನು ಮಧ್ಯದಲ್ಲಿ ನಿಲ್ಲಿಸಿದರು. ಕರೆ ಮುಕ್ತಾಯದ ನಂತರ ಭಾಷಣವನ್ನು ಪ್ರಾರಂಭಿಸಲೇ ಎಂದು ಜನರನ್ನು ಕೇಳಿದರು . ಆಗ 'ಅಮಿತ್ ಶಾ ಜಿಂದಾಬಾದ್' ಘೋಷಣೆಗಳೊಂದಿಗೆ ಚಪ್ಪಾಳೆಗಳು ಕ್ರೀಡಾಂಗಣದಲ್ಲಿ ಪ್ರತಿಧ್ವನಿಸಿದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com