ಧರ್ಮಾಧಾರಿತ ಜನಸಂಖ್ಯೆಯ ಅಸಮತೋಲನ ಸರಿ ಪಡಿಸಲು ಎಲ್ಲಾ ಸಮುದಾಯಗಳಿಗೂ ಸಮಾನ ನಾಗರಿಕ ಸಂಹಿತೆ ಅಗತ್ಯ: ಮೋಹನ್ ಭಾಗವತ್

ಸಮಗ್ರ ಚಿಂತನೆಯ ನಂತರ ಭಾರತವು  ಜನಸಂಖ್ಯಾ ನೀತಿಯನ್ನು ಸಿದ್ಧಪಡಿಸಬೇಕು ಮತ್ತು ಎಲ್ಲಾ ಸಮುದಾಯಗಳಿಗೆ ಸಮಾನವಾಗಿ ಅನ್ವಯಿಸಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ಹೇಳಿದ್ದಾರೆ.
ಮೋಹನ್ ಭಾಗವತ್
ಮೋಹನ್ ಭಾಗವತ್

ನಾಗ್ಪುರ: ಸಮಗ್ರ ಚಿಂತನೆಯ ನಂತರ ಭಾರತವು  ಜನಸಂಖ್ಯಾ ನೀತಿಯನ್ನು ಸಿದ್ಧಪಡಿಸಬೇಕು ಮತ್ತು ಎಲ್ಲಾ ಸಮುದಾಯಗಳಿಗೆ ಸಮಾನವಾಗಿ ಅನ್ವಯಿಸಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಸಂಸ್ಥಾಪನಾ ದಿನವಾದ ವಿಜಯದಶಮಿಯ ಪ್ರಯುಕ್ತ ಮಹಾರಾಷ್ಟ್ರದ ನಾಗಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಜನಸಂಖ್ಯೆಯನ್ನು ಹೊರೆ ಎಂದು ಭಾವಿಸುವ ಬದಲಿಗೆ ಅದನ್ನು ಶಕ್ತಿ ಎಂದು ಪರಿಗಣಿಸಬೇಕು, ಜನಸಂಖ್ಯೆ ಅಸಮತೋಲನವಾಗದಂತೆ ತಡೆಯಲು ಸಮಾನ ನಾಗರಿಕ ಸಂಹಿತೆ ಅಗತ್ಯವನ್ನೂ ಪ್ರತಿಪಾದಿಸಿದ್ದಾರೆ. ಲೋಕಸಭೆ ಚುನಾವಣೆಗಳು ಇನ್ನೇನು ಒಂದೂವರೆ ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಎದುರಾಗುತ್ತಿರುವಾಗ ಮೋಹನ್‌ ಭಾಗವತ್‌ ಈ ವಿಚಾರ ಪ್ರಸ್ತಾಪ ಮಾಡಿರುವುದು ಕುತೂಹಲ ಮೂಡಿಸಿದೆ.

ಧರ್ಮಾಧಾರಿತ ಜನಸಂಖ್ಯೆಯ ಅಸಮತೋಲನಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಿದೆ. ಜನಸಂಖ್ಯೆ ಹಂಚಿಕೆಯಲ್ಲಿ ಆಗುವ ವ್ಯತ್ಯಾಸಗಳು ಭೌಗೋಳಿಕ ಗಡಿಗಳನ್ನು ಬದಲಿಸುತ್ತವೆ. ಜನನ ಪ್ರಮಾಣ ದರ, ಬಲವಂತ ಅಥವಾ ಆಮಿಷ ಅಥವಾ ಆಸೆಗಳನ್ನು ಒಡ್ಡಿ ಮಾಡುವ ಮತಾಂತರ, ಅಕ್ರಮ ಒಳನುಸುಳುವಿಕೆಗಳು ಧರ್ಮಾಧಾರಿತ ಜನಸಂಖ್ಯೆಯಲ್ಲಿ ವ್ಯತ್ಯಯಕ್ಕೆ ಮುಖ್ಯ ಕಾರಣಗಳಾಗಿವೆ ಎಂದು ಹೇಳಿದ್ದಾರೆ.

ಜನಸಂಖ್ಯೆಯನ್ನು ಹೊರೆ ಎಂದುಕೊಂಡ ಚೀನಾ ಈಗ ವೃದ್ಧಾಪ್ಯದಲ್ಲಿದೆ. ಇದೀಗ ಆ ದೇಶದಲ್ಲಿ ಇಬ್ಬರು ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. 50 ವರ್ಷದ ನಂತರ ಭಾರತದಲ್ಲಿ ಎಷ್ಟು ಜನರಿಗೆ ಆಹಾರ ನೀಡಬೇಕಾಗುತ್ತದೆ? ಎಷ್ಟು ಜನರು 50 ವರ್ಷದ ನಂತರ ಕೆಲಸ ಮಾಡುವ ಸ್ಥಿತಿಯಲ್ಲಿ ಇರುತ್ತಾರೆಯೇ? ಇಷ್ಟು ಜನರು ಜೀವಿಸಬೇಕೆಂದರೆ ಏನೇನು ಮಾಡಬೇಕು? ಎಂಬುದನ್ನು ಆಲೋಚಿಸಬೇಕು. ಜನಸಂಖ್ಯೆ ತೀರಾ ಕಡಿಮೆಯೂ ಆಗಬಾರದು ಎಂದರು.

ಜನಸಂಖ್ಯೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು, ಜನನ ವಿಚಾರ ಒಂದೆಡೆಯಾದರೆ, ಬಲವಂತದ ಮತಾಂತರ ಹಾಗೂ ಅಕ್ರಮ ಒಳನುಸುಳುವಿಕೆಯಿಂದಲೂ ಸಮಸ್ಯೆ ಆಗುತ್ತದೆ. ಜನಸಂಖ್ಯೆಯಲ್ಲಿ ಅಸಂತುಲನ ಉಂಟಾಗಿದ್ದರಿಂದ ಅನೇಕ ದೇಶಗಳು ಒಡೆದಿವೆ. ಜನಸಂಖ್ಯೆ ಸಮತೋಲನ ಕಾಯ್ದುಕೊಳ್ಳಲು ಸಮಾನ ನೀತಿ ಜಾರಿ ಆಗಲಿ. ಇದು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು. ಈ ನೀತಿಯನ್ನು ಒಪ್ಪಿಕೊಳ್ಳಲು ಸಮಾಜದ ಮನಸ್ಸನ್ನು ಸಿದ್ಧಗೊಳಿಸಬೇಕು.

ಸಮಾಜಕ್ಕೆ ಯಾವುದೇ ವಿಚಾರದಿಂದ ಲಾಭ ಕಂಡುಬಂದರೆ ಅದನ್ನು ಸ್ವೀಕರಿಸುತ್ತದೆ. ಆದರೆ ತನ್ನದೇನನ್ನೋ ತ್ಯಾಗ ಮಾಡಬೇಕು ಎಂದು ಪ್ಪಿಸಬೇಕೆಂದರೆ ಜಾಗೃತಿ ಮೂಡಿಸಬೇಕಾಗುತ್ತದೆ. ಭಾರತದಲ್ಲಿ ಇಷ್ಟೊಂದು ಭಾಷೆ, ಸಂಪ್ರದಾಯಗಳಿವೆ. ಕೆಲವರು ವಿದೇಶಿ ಸಂಪ್ರದಾಯಗಳಲ್ಲಿದ್ದಾರೆ ಆದರೆ ಅವರ ಪೂರ್ವಜನರು ನಮ್ಮವರೇ. ಅವರೆಲ್ಲರ ಜತೆಗೆ ಭಾರತ ನಿರಂತರವಾಗಿ ಮುನ್ನಡೆದಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com