ವಂದೇ ಭಾರತ್ ರೈಲಿಗೆ ಮತ್ತೆ ವಿಘ್ನ; ಚಕ್ರಗಳು ಜಾಮ್, ಪ್ರಯಾಣಿಕರ ಶಿಫ್ಟಿಂಗ್

ಕಳೆದೆರಡು ದಿನ ಜಾನುವಾರುಗಳಿಗೆ ಡಿಕ್ಕಿ ಹೊಡೆದು ಸುದ್ದಿಯಾಗಿದ್ದ ಹೊಸದಾಗಿ ಪ್ರಾರಂಭಿಸಲಾದ ಸೆಮಿ-ಹೈ-ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಶನಿವಾರ ಮತ್ತೆ ವಿಘ್ನ ಎದುರಾಯಿತು. ರೈಲಿನ ಚಕ್ರಗಳು ಜಾಮ್ ಆಗಿದ್ದರಿಂದ ಮುಂದೆ...
ವಂದೇ ಭಾರತ್ ರೈಲು
ವಂದೇ ಭಾರತ್ ರೈಲು

ನವದೆಹಲಿ: ಕಳೆದೆರಡು ದಿನ ಜಾನುವಾರುಗಳಿಗೆ ಡಿಕ್ಕಿ ಹೊಡೆದು ಸುದ್ದಿಯಾಗಿದ್ದ ಹೊಸದಾಗಿ ಪ್ರಾರಂಭಿಸಲಾದ ಸೆಮಿ-ಹೈ-ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಶನಿವಾರ ಮತ್ತೆ ವಿಘ್ನ ಎದುರಾಯಿತು. ರೈಲಿನ ಚಕ್ರಗಳು ಜಾಮ್ ಆಗಿದ್ದರಿಂದ ಮುಂದೆ ಚಲಿಸಲಾಗದೇ ಪ್ರಯಾಣಿಕರು ತೊಂದರೆಗೆ ಸಿಲುಕಿದರು.

“ವಾರಣಾಸಿ ವಂದೇ ಭಾರತ್ (ರೈಲು ಸಂಖ್ಯೆ 22436) ಉತ್ತರ ಮಧ್ಯ ರೈಲ್ವೆಯ ದಂಕೌರ್ ಮತ್ತು ವೈರ್ ನಿಲ್ದಾಣಗಳ ನಡುವಿನ C8 ಕೋಚ್‌ನ ಟ್ರಾಕ್ಷನ್ ಮೋಟಾರ್‌ನಲ್ಲಿ ಬೇರಿಂಗ್ ದೋಷದಿಂದಾಗಿ ವಿಫಲವಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇರಿಂಗ್ ಜಾಮ್ ಅನ್ನು ಸರಿಪಡಿಸಲಾಯಿತು. ಆದಾಗ್ಯೂ ಫ್ಲ್ಯಾಟ್ ಟೈರ್ ಕಾರಣದಿಂದ ಪ್ರಯಾಣಿಕರನ್ನು ಶತಾಬ್ದಿ ರೈಲಿಗೆ ನವದೆಹಲಿಯ ಖುರ್ಜಾ ನಿಲ್ದಾಣದಿಂದ ಸ್ಥಳಾಂತರಿಸಲಾಯಿತು ಎಂದು ಹೇಳಿದ್ದಾರೆ.

ರೈಲನ್ನು ನಿರ್ವಹಣಾ ಡಿಪೋಗೆ ಕೊಂಡೊಯ್ದ ನಂತರ ವೈಫಲ್ಯದ ವಿವರವಾದ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್‌ನ ಆನಂದ್ ನಿಲ್ದಾಣದ ಬಳಿ, ಗಾಂಧೀನಗರ- ಮುಂಬೈ ರೈಲು ಹಸುವೊಂದಕ್ಕೆ ಶುಕ್ರವಾರ ಡಿಕ್ಕಿ ಹೊಡೆದಿತ್ತು. ಇದರಿಂದ ರೈಲಿನ ಮುಂಭಾಗ ಡೆಂಟ್ ಆಗಿತ್ತು. ಒಂದು  ದಿನ ಮುಂಚೆ ಗುರುವಾರ ಅಹಮದಾಬಾದ್ ಬಳಿ ಇದೇ ರೈಲು ಎಮ್ಮೆಗಳ ಹಿಂಡಿಗೆ ಡಿಕ್ಕಿಯಾಗಿತ್ತು. ರೈಲಿನ ಮುಂಭಾಗದ ಒಂದು ಬದಿ ತುಂಡಾಗಿತ್ತು. ನಾಲ್ಕು ಎಮ್ಮೆಗಳು ಮೃತಪಟ್ಟಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com