ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಹಸ್ಯ ಮತದಾನ; ಎರಡೂ ಅಭ್ಯರ್ಥಿಗಳಿಗೆ ಸಮಾನ ಅವಕಾಶ: ಮಧುಸೂದನ್ ಮಿಸ್ತ್ರಿ

ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆಗೆ ರಹಸ್ಯ ಮತದಾನ ನಡೆಯಲಿದ್ದು, ಯಾರು ಯಾರಿಗೆ ಎಷ್ಟು ಮತ ಹಾಕಿದ್ದಾರೆ ಎನ್ನುವುದನ್ನು ಖಚಿತ ಪಡಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಬುಧವಾರ ಹೇಳಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ-ಶಶಿ ತರೂರ್
ಮಲ್ಲಿಕಾರ್ಜುನ್ ಖರ್ಗೆ-ಶಶಿ ತರೂರ್

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆಗೆ ರಹಸ್ಯ ಮತದಾನ ನಡೆಯಲಿದ್ದು, ಯಾರು ಯಾರಿಗೆ ಎಷ್ಟು ಮತ ಹಾಕಿದ್ದಾರೆ ಎನ್ನುವುದನ್ನು ಖಚಿತ ಪಡಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಬುಧವಾರ ಹೇಳಿದ್ದಾರೆ.

ಎರಡೂ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸಲು ಚುನಾವಣಾ ಪ್ರಾಧಿಕಾರ ಎಲ್ಲ ರೀತಿಯ ಪ್ರಯತ್ನ ಮಾಡಿದೆ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅಭ್ಯರ್ಥಿಗಳಾಗಿದ್ದು ಅಕ್ಟೋಬರ್ 17ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮತದಾನ ನಡೆಯಲಿದೆ. ಇನ್ನು ಅಕ್ಟೋಬರ್ 19ರಂದು ಮತ ಎಣಿಕೆ ನಡೆಯಲಿದೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಮಿಸ್ತ್ರಿ ಅವರು, ಮತದಾನದ ಸಂಪೂರ್ಣ ಪ್ರಕ್ರಿಯೆ ಮತ್ತು ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಮತದಾನದ ನಂತರ ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಮತಪೆಟ್ಟಿಗೆಗಳನ್ನು ಸೀಲ್ ಮಾಡಲಾಗುತ್ತದೆ. ನಂತರ ಆಯಾ ರಾಜ್ಯಗಳ ಚುನಾವಣಾಧಿಕಾರಿಗಳು ಈ ಬಾಕ್ಸ್‌ಗಳೊಂದಿಗೆ ಕಾಂಗ್ರೆಸ್ ಪ್ರಧಾನ ಕಚೇರಿಯನ್ನು ತಲುಪುತ್ತಾರೆ ಎಂದು ಮಿಸ್ತ್ರಿ ಹೇಳಿದರು.

ಮತ ಎಣಿಕೆಗೂ ಮುನ್ನ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತಪೆಟ್ಟಿಗೆಗಳ ಸೀಲು ತೆರೆಯಲಾಗುತ್ತದೆ. ಇನ್ನು ಮತಪೆಟ್ಟಿಗೆಗಳನ್ನು ಇಡಲು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿಯೇ ಸ್ಟ್ರಾಂಗ್ ರೂಮ್ ಸ್ಥಾಪಿಸಲಾಗಿದೆ ಎಂದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಚುನಾವಣೆ ಸಂಪೂರ್ಣ ಗೌಪ್ಯವಾಗಿರುತ್ತದೆ. ಯಾರು ಯಾರಿಗೆ ಮತ ಹಾಕಿದರು ಮತ್ತು ಯಾವ ರಾಜ್ಯದಿಂದ ಒಬ್ಬ ಅಭ್ಯರ್ಥಿ ಎಷ್ಟು ಮತ ಪಡೆದಿದ್ದಾರೆ ಎಂಬುದು ತಿಳಿಯುವುದಿಲ್ಲ. ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ದೂರು ಬಂದಿದ್ದು, ಅದನ್ನು ಪರಿಹರಿಸಲಾಗಿದೆ ಎಂದು ಮಿಸ್ತ್ರಿ ಹೇಳಿದರು.

ಈ ಮೊದಲು, ಕೇಂದ್ರ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಅವರಿಂದ ಸಾರ್ವಜನಿಕ ಸ್ಪಷ್ಟೀಕರಣವನ್ನು ನಿರೀಕ್ಷಿಸುವುದಾಗಿ ಮಂಗಳವಾರ ತರೂರ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com