ಕಾಶ್ಮೀರ: ಉಗ್ರ ದಾಳಿಯಲ್ಲಿ ಗಾಯಗೊಂಡಿದ್ದ ಶ್ವಾನ ಸೈನಿಕ 'ಜೂಮ್' ಸ್ಥಿತಿ ಗಂಭೀರ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಭಾರತೀಯ ಸೇನೆಯ ಆಕ್ರಮಣಕಾರಿ ನಾಯಿ "ಜೂಮ್" ಶ್ರೀನಗರದ ಮಿಲಿಟರಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದೆ.
ದಾಳಿಯಲ್ಲಿ ಜೂಮ್ ದೇಹ ಹೊಕ್ಕಿದ್ದ ನಾಲ್ಕು ಗುಂಡುಗಳನ್ನು ಹೊರ ತೆಗೆಯಲಾಗಿದೆ. ಅದರ ಮುಖ ಮತ್ತು ಹಿಂಭಾಗದ ಬಲಗಾಲಿನ ಮೇಲೆ ಗುಂಡೇಟಿನ ಗಾಯವಾಗಿದ್ದ ಕಾರಣ ಆಪರೇಷನ್ ಮಾಡಲಾಗಿದೆ.
ದಾಳಿಯಲ್ಲಿ ನಾಯಿ ಗಂಭೀರವಾಗಿ ಗಾಯಗೊಳ್ಳುವ ಮುನ್ನ ನಡೆದ ಜಂಟಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಭಾನುವಾರ ತಡರಾತ್ರಿ ದಕ್ಷಿಣ ಕಾಶ್ಮೀರ ಜಿಲ್ಲೆಯ ತಂಗ್ಪಾವಾ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಬಂದ ನಂತರ ಎನ್ಕೌಂಟರ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.
ಉಗ್ರರು ಅಡಗಿರುವ ಮನೆಯಿಂದ ಆ ಉಗ್ರರನ್ನು ಹೊರಗೆ ಕರೆತರುವ ಕೆಲಸವನ್ನು ಜೂಮ್ ಎಂಬ ಭಾರತೀಯ ಸೇನೆಯ ನಾಯಿಗೆ ವಹಿಸಲಾಗಿತ್ತು. ಆ ನಾಯಿ ಮನೆಯೊಳಗೆ ಹೋಗಿ ಉಗ್ರರ ಮೇಲೆ ದಾಳಿ ಮಾಡಿತ್ತು. ಈ ಕಾರ್ಯಾಚರಣೆಯ ಸಮಯದಲ್ಲಿ ಆ ನಾಯಿಯ ಮೇಲೆ ಎರಡು ಬಾರಿ ಗುಂಡಿನ ದಾಳಿ ನಡೆಸಿದ್ದರಿಂದ ನಾಯಿಗೆ ಗಂಭೀರವಾದ ಗಾಯಗಳಾಗಿವೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದರೂ ಹೆದರದ ಈ ನಾಯಿ ತನ್ನ ಕಾರ್ಯವನ್ನು ಮುಂದುವರೆಸಿತು. ಅಲ್ಲದೆ ಇಬ್ಬರು ಭಯೋತ್ಪಾದಕರ ಹತ್ಯೆಗೂ ಕಾರಣವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ