ಚೆನ್ನೈ: ಪಾಗಲ್ ಪ್ರೇಮಿಯಿಂದ ರೈಲಿನಡಿಗೆ ಬಿದ್ದು ದಾರುಣ ಅಂತ್ಯ ಕಂಡ ವಿದ್ಯಾರ್ಥಿನಿ ತಂದೆ ಹೃದಯಾಘಾತದಿಂದ ನಿಧನ

20 ವರ್ಷದ ಕಾಲೇಜು ವಿದ್ಯಾರ್ಥಿನಿ ಎಂ ಸತ್ಯಾಳ ಹತ್ಯೆಯ ಬೆನ್ನಲ್ಲೇ ಆಕೆಯ ತಂದೆ ಮಣಿಕ್ಕಮ್ ಇಂದು ಶುಕ್ರವಾರ ನಸುಕಿನ ಜಾವ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ವಿದ್ಯಾರ್ಥಿನಿ ಸತ್ಯಾ ಮೃತಪಟ್ಟ ರೈಲು ನಿಲ್ದಾಣದ ಸ್ಥಳ
ವಿದ್ಯಾರ್ಥಿನಿ ಸತ್ಯಾ ಮೃತಪಟ್ಟ ರೈಲು ನಿಲ್ದಾಣದ ಸ್ಥಳ
Updated on

ಚೆನ್ನೈ: 20 ವರ್ಷದ ಕಾಲೇಜು ವಿದ್ಯಾರ್ಥಿನಿ ಎಂ ಸತ್ಯಾಳ ಹತ್ಯೆಯ ಬೆನ್ನಲ್ಲೇ ಆಕೆಯ ತಂದೆ ಮಣಿಕ್ಕಮ್ ಇಂದು ಶುಕ್ರವಾರ ನಸುಕಿನ ಜಾವ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪ್ರೀತಿಸಲು ನಿರಾಕರಿಸಿದಳು ಎಂದು ಸತ್ಯಾಳನ್ನು ಆಕೆಯ ಪ್ರಿಯಕರ ನಿನ್ನೆ ಅಪರಾಹ್ನ ಸೈಂಟ್ ಥಾಮಸ್ ಮೌಂಟ್ ರೈಲು ನಿಲ್ದಾಣದಲ್ಲಿ ಎದುರುಗಡೆಯಿಂದ ರೈಲು ಬರುತ್ತಿದ್ದ ವೇಳೆ ತಳ್ಳಿ ಸತೀಶ್ ಎಂಬಾತ ಹತ್ಯೆ ಮಾಡಿದ್ದನು.

ಮಣಿಕ್ಕಮ್ ಟ್ರಾವಲ್ ಕಂಪೆನಿಯೊಂದನ್ನು ನಡೆಸಿಕೊಂಡು ಹೋಗುತ್ತಿದ್ದರು. ಮಗಳ ಹಠಾತ್ ಸಾವಿನಿಂದ ನೊಂದಿದ್ದ ತಂದೆ ತೀವ್ರ ಅಸ್ವಸ್ಥಕ್ಕೀಡಾಗಿದ್ದರು. ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತಾದರೂ ಹೃದಯಾಘಾತಕ್ಕೀಡಾಗಿದ್ದ ಅವರು ಅಲ್ಲಿಗೆ ತಲುಪುವಷ್ಟರಲ್ಲೇ ಅಸುನೀಗಿದ್ದರು.

ಆರೋಪಿ 23 ವರ್ಷದ ಯುವಕ ಸತೀಶ್ ನನ್ನು ತೊರೈಪಕ್ಕಮ್ ಎಂಬಲ್ಲಿ ಕಳೆದ ತಡರಾತ್ರಿ ಮಂಬಲಮ್ ಆರ್ ಪಿಎಫ್ ಪೊಲೀಸರು ಮತ್ತು ಸೈಂಟ್ ಥಾಮಸ್ ಮೌಂಟ್ ಪೊಲೀಸರ ವಿಶೇಷ ತಂಡ ಬಂಧಿಸಿದೆ. ಅಲ್ಲಿಂದ ತಂಬರನ್ ಆರ್ ಪಿಎಫ್ ನಿಲ್ದಾಣಕ್ಕೆ ಕರೆದುಕೊಂಡು ಹೋಗಲಾಗಿದ್ದು ನಂತರ ಮಾಂಬಲಮ್ ಆರ್ ಪಿಎಫ್ ಸ್ಟೇಷನ್ ಗೆ ಹೆಚ್ಚಿನ ತನಿಖೆಗೆ ಕರೆದೊಯ್ಯಲಾಯಿತು.

ಕಳೆದೊಂದು ವರ್ಷದಿಂದ ತನ್ನನ್ನು ಪ್ರೀತಿಸುವಂತೆ ಸತ್ಯಾಳನ್ನು ಪೀಡಿಸುತ್ತಿದ್ದ ಸತೀಶ್ ಆಕೆ ಪ್ರೀತಿಸಲು ನಿರಾಕರಿಸಿದ್ದಕ್ಕೆ ನಿನ್ನೆ ಅಪರಾಹ್ನ ರೈಲು ನಿಲ್ದಾಣದಲ್ಲಿ ನಿಂತಿದ್ದ ವೇಳೆ ಎದುರಿನಿಂದ ರೈಲು ಬರುತ್ತಿದ್ದಾಗ ಸತ್ಯಾಳನ್ನು ತಳ್ಳಿ ಹತ್ಯೆ ಮಾಡಿದ್ದಾನೆ. 

ದ್ವಿತೀಯ ವರ್ಷದ ಪದವಿ ಓದುತ್ತಿದ್ದ ಸತ್ಯಾ ಕಳೆದ ತಿಂಗಳಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಆಕೆಯ ತಾಯಿ ಅಡಂಬಕ್ಕಮ್ ಪೊಲೀಸ್ ಸ್ಟೇಷನ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದಾರೆ. ಸತ್ಯಳ ಆಂಟಿ ಮತ್ತು ಅಂಕಲ್ ಕೂಡ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಸತ್ಯಾ ತನ್ನ ಪೋಷಕರ ಜೊತೆ ಸೈಂಟ್ ಥಾಮಸ್ ಮೌಂಟ್ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದಳು.

8ನೇ ತರಗತಿಯವರೆಗೆ ಓದಿ ಶಾಲೆ ಬಿಟ್ಟಿದ್ದ ಸತೀಶ್ ಅದೇ ಕಾಲೊನಿಯಲ್ಲಿ ಸತ್ಯಾಳ ಕ್ವಾರ್ಟರ್ಸ್ ನ ವಿರುದ್ಧ ದಿಕ್ಕಿನಲ್ಲಿ ವಾಸವಾಗಿದ್ದಾನೆ, ಆತನ ತಂದೆ ನಿವೃತ್ತ ಪೊಲೀಸ್ ಸಬ್ ಇನ್ಸ್ ಪೆಕ್ಟರ್.

ಇತ್ತೀಚೆಗೆ ಸತ್ಯಾ ಅವರ ಪೋಷಕರು ಸತೀಶ್ ವಿರುದ್ಧ ಮಾಂಬಲಂ ಮತ್ತು ಸೇಂಟ್ ಥಾಮಸ್ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿದ್ದರು. ಸತ್ಯಾ ಟಿ.ನಗರದಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ಸತೀಶ್ ಆಕೆಯನ್ನು ರೈಲ್ವೆ ನಿಲ್ದಾಣದಲ್ಲಿ ಹಿಂಬಾಲಿಸಿದ. ಅಲ್ಲಿ ವಾಗ್ವಾದ ನಡೆದಿದ್ದು, ತಾಂಬರಂನಿಂದ ಚೆನ್ನೈ ಬೀಚ್‌ಗೆ ಹೋಗುವ ರೈಲು ಹತ್ತಲು ತಯಾರಾಗುತ್ತಿದ್ದಾಗ ಸತೀಶ್ ಆಕೆಯನ್ನು ರೈಲಿನ ಮುಂದೆ ತಳ್ಳಿದ್ದಾನೆ ಎನ್ನಲಾಗಿದೆ. ಸತ್ಯಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com