ರಾಮ ಮಂದಿರ, 370ನೇ ವಿಧಿ ತೆಗೆಯಲು ಮೋದಿನೇ ಬರಬೇಕಾಯಿತು: ಕೇಂದ್ರ ಗೃಹ ಸಚಿವ ಅಮಿತ್ ಶಾ

ಆರ್ಟಿಕಲ್ 370 ರದ್ದತಿ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಅಸಾಧ್ಯವೆಂದು ಹೇಳಲಾಗುತ್ತಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಅದನ್ನು ಮಾಡಿ ತೋರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಿಮ್ಲಾ: ಆರ್ಟಿಕಲ್ 370 ರದ್ದತಿ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಅಸಾಧ್ಯವೆಂದು ಹೇಳಲಾಗುತ್ತಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಅದನ್ನು ಮಾಡಿ ತೋರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ನವೆಂಬರ್ 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಆಡಳಿತಾರೂಢ ಬಿಜೆಪಿಯ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ಮೋದಿ ಸರ್ಕಾರವು 2019ರ ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿತು. '370ನೇ ವಿಧಿಯನ್ನು ರದ್ದುಗೊಳಿಸಲಾಗುವುದು ಎಂದು ನೀವು ಎಂದಾದರೂ ಭಾವಿಸಿದ್ದೀರಾ ಎಂದು ಕಾರ್ಯಕರ್ತರನ್ನು ಕೇಳಿದರು. 370ನೇ ವಿಧಿಯ ಬಗ್ಗೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಪ್ರಶ್ನಿಸಿದರೆ ಅವರು ಮೌನವಹಿಸುತ್ತಾರೆ. ಅದಕ್ಕೆ ಕಾರಣ ಜವಾಹರಲಾಲ್ ನೆಹರು ಎಂದು ಹೇಳಿದರು. 

ಇನ್ನು ರಾಮಮಂದಿರ ನಿರ್ಮಾಣ ವಿಚಾರದಲ್ಲೂ ಕಾಂಗ್ರೆಸ್ ನಮ್ಮನ್ನು ಗೇಲಿ ಮಾಡುತ್ತಿತ್ತು. ನಿಮ್ಮ ಕೈಯಲ್ಲಿ ಅಯೋಧ್ಯೆಯಲ್ಲೇ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಾ ಎಂದು ಪ್ರಶ್ನಿಸುತ್ತಿತ್ತು. ಇದೀಗ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ ಎಂದರು.

ರಾಮ ಮಂದಿರ ನಿರ್ಮಾಣವಾಗಲಿ ಅಥವಾ 370ನೇ ವಿಧಿಯ ರದ್ದತಿಯಾಗಲಿ ಮೋದಿ ಸರಕಾರ ಈ ಹಿಂದೆ ಅಸಾಧ್ಯ ಎನಿಸಿದ್ದನ್ನು ಸಾಧ್ಯವಾಗಿಸಿದೆ ಎಂದು ಶಾ ಹೇಳಿದರು.

ಪ್ರಧಾನಿಯವರು ರಾಜಕೀಯದಲ್ಲಿ ಕುಟುಂಬ ರಾಜಕಾರಣವನ್ನು ಕೊನೆಗೊಳಿಸಿದ್ದಾರೆ. ರಾಜ ಮತ್ತು ರಾಣಿಯ ದಿನಗಳು ಕಳೆದುಹೋಗಿವೆ. ಪ್ರಧಾನಿ ಮೋದಿ ಅವರು ದೆಹಲಿಯ ರಾಜಪಥದ ಹೆಸರನ್ನು ಕರ್ತವ್ಯ ಪಥ್ ಎಂದು ಬದಲಾಯಿಸಿದರು. ಅಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಭವ್ಯವಾದ ಪ್ರತಿಮೆಯನ್ನು ಸ್ಥಾಪಿಸಿದರು. ಮೋದಿ ಸರ್ಕಾರ ಕೇವಲ ಎಂಟು ವರ್ಷಗಳಲ್ಲಿ ಭಾರತದ ಆರ್ಥಿಕತೆಯನ್ನು ವಿಶ್ವದ 11ನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ತಂದಿದೆ ಎಂದು ಹೇಳಿದರು.

ಹಟ್ಟಿ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ ನೀಡುವ ಮೂಲಕ ಗಿರ್ಪಾರ್ ಪ್ರದೇಶದ ಜನರ 55 ವರ್ಷಗಳ ಹೋರಾಟವನ್ನು ಪ್ರಧಾನಿ ಮೋದಿ ಕೊನೆಗೊಳಿಸಿದರು. ಇದರಿಂದ 1.60 ಲಕ್ಷ ಜನರಿಗೆ ಪ್ರಯೋಜನವಾಗಲಿದೆ ಎಂದು ಶಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com