ನವದೆಹಲಿ: 2002ರ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣ ಮತ್ತು ಗುಜರಾತ್ ಗಲಭೆಯಲ್ಲಿ ಸಂತ್ರಸ್ತೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ 11 ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ನವೆಂಬರ್ 29 ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ನ್ಯಾಯಪೀಠವು ಗುಜರಾತ್ ಸರ್ಕಾರ ಸಲ್ಲಿಸಿದ ಅಫಿಡವಿಟ್ಟನ್ನು ಎಲ್ಲರಿಗೂ ಸಿಗುವಂತೆ ಆದೇಶ ನೀಡಿದರು. ಗುಜರಾತ್ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ಗೆ ಉತ್ತರ ನೀಡಲು ಅರ್ಜಿದಾರರಿಗೆ ಕಾಲಾವಕಾಶ ನೀಡಲಾಗಿದೆ.
ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಗುಜರಾತ್ ಸರ್ಕಾರ ಪ್ರತಿಅರ್ಜಿ ಸಲ್ಲಿಸಿದೆ. ಸರ್ಕಾರದ ಅಫಿಡವಿಟ್ಟು ಎಲ್ಲಾ ಸಂಬಂಧಪಟ್ಟವರಿಗೆ ಸಿಗುವಂತೆ ನ್ಯಾಯಾಲಯ ಆದೇಶ ನೀಡಿದೆ.
ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿದ್ದರಿಂದ, ಅಪರಾಧಿಗಳ ಕ್ಷಮಾಪಣೆಗಾಗಿ ಕೇಂದ್ರದಿಂದ ಸೂಕ್ತ ಆದೇಶಗಳನ್ನು ಪಡೆದುಕೊಂಡಿದೆ ಎಂದು ಅದು ಹೇಳಿದೆ.
2002ರಲ್ಲಿ ಗೋಧ್ರಾ ರೈಲು ದಹನ ಘಟನೆಯ ನಂತರ ಭುಗಿಲೆದ್ದ ಗಲಭೆ ಹಿಂಸಾಚಾರದಲ್ಲಿ ತಪ್ಪಿಸಿಕೊಂಡು ಓಡಿಹೋಗುವಾಗ ಬಿಲ್ಕಿಸ್ ಬಾನೋಗೆ 21 ವರ್ಷಗಳಾಗಿದ್ದು ಐದು ತಿಂಗಳ ಗರ್ಭಿಣಿಯಾಗಿದ್ದರು. ಗಲಭೆಯಲ್ಲಿ ಕೊಲೆಯಾದ ಏಳು ಕುಟುಂಬ ಸದಸ್ಯರಲ್ಲಿ ಆಕೆಯ ಮೂರು ವರ್ಷದ ಮಗಳೂ ಸೇರಿದ್ದಳು.
ಗುಜರಾತ್ ಸರ್ಕಾರವು ತನ್ನ ನೀತಿಯಡಿಯಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡಿದ ನಂತರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ 11 ಮಂದಿ ಈ ವರ್ಷ ಆಗಸ್ಟ್ 15 ರಂದು ಗೋಧ್ರಾ ಉಪ-ಜೈಲಿನಿಂದ ಹೊರಗೆಬಂದಿದ್ದರು. ಅವರು 15 ವರ್ಷಗಳಿಗೂ ಹೆಚ್ಚು ಕಾಲ ಜೈಲು ವಾಸವನ್ನು ಪೂರ್ಣಗೊಳಿಸಿದ್ದರು.
Advertisement