ಶರದ್ ಪವಾರ್ ಭೇಟಿ ಮಾಡಿದ ನಿತೀಶ್ ಕುಮಾರ್, ಮೊದಲು ಒಗ್ಗಟ್ಟಾಗಿ ಎಂದು ಪ್ರತಿಪಕ್ಷಗಳಿಗೆ ಒತ್ತಾಯ
ಲೋಕಸಭೆ ಚುನಾವಣೆಗೆ ಮುನ್ನ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬುಧವಾರ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾದರು.
Published: 07th September 2022 08:13 PM | Last Updated: 08th September 2022 03:46 PM | A+A A-

ಶರದ್ ಪವಾರ್ ಭೇಟಿ ಮಾಡಿದ ನಿತೀಶ್ ಕುಮಾರ್
ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬುಧವಾರ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾದರು.
ಕಳೆದ ತಿಂಗಳು ಬಿಜೆಪಿಯೊಂದಿಗಿನ ಸಂಬಂಧ ಕಡಿದುಕೊಂಡ ನಂತರ ಜನತಾ ದಳ ಯುನೈಟೆಡ್‌ನ ಮುಖ್ಯಸ್ಥ ನಿತೀಶ್ ಕುಮಾರ್ ಸೋಮವಾರದಿಂದ ರಾಷ್ಟ್ರ ರಾಜಧಾನಿಯಲ್ಲಿ ಭೇಟಿಯಾಗಲು ಬಯಸಿರುವ ಪ್ರತಿಪಕ್ಷಗಳ ನಾಯಕರ ಸುದೀರ್ಘ ಪಟ್ಟಿಯನ್ನು ಹೊಂದಿದ್ದಾರೆ.
ಕಾಂಗ್ರೆಸ್‌ನ ರಾಹುಲ್ ಗಾಂಧಿ ಮತ್ತು ಜನತಾದಳ ಸೆಕ್ಯುಲರ್‌ನ ಎಚ್‌ಡಿ ಕುಮಾರಸ್ವಾಮಿ ನಂತರ ಅವರು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐನ ಡಿ ರಾಜಾ, ಭಾರತೀಯ ರಾಷ್ಟ್ರೀಯ ಲೋಕದಳದ ಓಂ ಪ್ರಕಾಶ್ ಚೌತಾಲಾ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದರು. ಇಂದು ಬೆಳಗ್ಗೆ ಅವರು ರಾಜ್ಯದಲ್ಲಿ ಮಿತ್ರ ಪಕ್ಷವಾಗಿರುವ ಸಿಪಿಐಎಂಎಲ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಅವರನ್ನು ಭೇಟಿಯಾದರು. ಬಳಿಕ ಶರದ್ ಪವಾರ್ ಅವರನ್ನು ಭೇಟಿ ಮಾಡಿದರು.
ಶರದ್ ಪವಾರ್ ಭೇಟಿ ಬಳಿಕ ಮಾತನಾಡಿದ ನಿತೀಶ್ ಕುಮಾರ್, “ನಾನು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ, ನಾನು (ಪ್ರತಿಪಕ್ಷಗಳನ್ನು) ಒಗ್ಗೂಡಿಸಲು ಪ್ರಯತ್ನಿಸುತ್ತೇನೆ. ಬಿಜೆಪಿಯು ದೇಶವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಹೀಗಾಗಿ ಪ್ರತಿಪಕ್ಷಗಳು ಮೊದಲು ಒಗ್ಗಟ್ಟಾಗಬೇಕು. ಎಲ್ಲರೂ ಒಟ್ಟಾಗಿ ಚುನಾವಣೆಗಳನ್ನು ಎದುರಿಸಿದರೆ, ಆಗ ಚಿತ್ರಣವು ವಿಭಿನ್ನವಾಗಿರುತ್ತದೆ. ನಾವು ಎಲ್ಲರೊಂದಿಗೆ ಮಾತನಾಡುತ್ತಿದ್ದೇವೆ ಎಂದು ಹೇಳಿದರು.
ಇದನ್ನು ಓದಿ: ಪ್ರಧಾನಿ ಹುದ್ದೆಯ ಅಪೇಕ್ಷೆ ಇಲ್ಲ, ವಿಪಕ್ಷಗಳನ್ನು ಒಗ್ಗೂಡಿಸುವ ಸಂದರ್ಭ ಇದು: ನಿತೀಶ್ ಕುಮಾರ್
ಸದ್ಯಕ್ಕೆ ನಿತೀಶ್ ಕುಮಾರ್ ಅವರ ಯೋಜನೆಯು ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟದ ಅಗತ್ಯವನ್ನು ಪ್ರತಿಪಕ್ಷಗಳ ಮೇಲೆ ಪ್ರಭಾವಿಸುವುದು ಎಂದು ಮೂಲಗಳು ತಿಳಿಸಿವೆ. 2019 ರ ಚುನಾವಣೆಗೆ ಮುಂಚಿತವಾಗಿ ಪ್ರತಿಪಕ್ಷಗಳು ಪ್ರದರ್ಶಿಸಿದ ಒಗ್ಗಟ್ಟಿನ ಕೊರತೆಯ ದೃಷ್ಟಿಯಿಂದ ಇದು ಅತ್ಯಗತ್ಯ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾರು ಮುಖಾಮುಖಿಯಾಗುತ್ತಾರೆ ಎಂಬ ಬಗ್ಗೆ ಒಮ್ಮತ ಮೂಡಿಲ್ಲ. ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ನಿತೀಶ್ ಕುಮಾರ್ ಸೇರಿದಂತೆ ಹಲವಾರು ನಾಯಕರನ್ನು ಸಂಭವನೀಯ ಮುಖಗಳಾಗಿ ನೋಡಲಾಗುತ್ತಿದೆ.