ಸೋನಾಲಿ ಫೋಗಟ್ ಸಾವಿನ ನಂತರ ಸುದ್ದಿಯಾಗಿದ್ದ ರೆಸ್ಟೋರೆಂಟ್ ತೆರವು ಕಾರ್ಯ ಪುನಾರಂಭ
ಕಳೆದ ತಿಂಗಳು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ನಂತರ ಸುದ್ದಿಯಾಗಿದ್ದ ಗೋವಾದ ಅಂಜುನಾ ಬೀಚ್‌ನಲ್ಲಿರುವ ಕರ್ಲೀಸ್ ರೆಸ್ಟೋರೆಂಟ್‌ನ ಕೆಲವು ಭಾಗಗಳನ್ನು ತೆಲವು ಮಾಡುವ ಕಾರ್ಯ ಸುಪ್ರೀಂ ಕೋರ್ಟ್ ಆದೇಶದಿಂದಾಗಿ...
Published: 10th September 2022 12:37 AM | Last Updated: 10th September 2022 01:32 PM | A+A A-

ಗೋವಾ ಕರ್ಲೀಸ್ ರೆಸ್ಟೋರೆಂಟ್
ಪಣಜಿ: ಕಳೆದ ತಿಂಗಳು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ನಂತರ ಸುದ್ದಿಯಾಗಿದ್ದ ಗೋವಾದ ಅಂಜುನಾ ಬೀಚ್‌ನಲ್ಲಿರುವ ಕರ್ಲೀಸ್ ರೆಸ್ಟೋರೆಂಟ್‌ನ ಕೆಲವು ಭಾಗಗಳನ್ನು ತೆಲವು ಮಾಡುವ ಕಾರ್ಯ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಕೆಲ ಕಾಲ ಸ್ಥಗಿತಗೊಂಡಿತ್ತು. ಈಗ ತೆರವು ಕಾರ್ಯಾಚರಣೆ ಶುಕ್ರವಾರ ಮಧ್ಯಾಹ್ನ ಪುನರಾರಂಭವಾಗಿದೆ.
ಇಂದು ಬೆಳಗ್ಗೆ ರೆಸ್ಟೋರೆಂಟ್ ನೆಲಸಮ ಮಾಡುವುದಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತ್ತು. ಆದ್ದರಿಂದ ನೆಲಸಮ ಕಾರ್ಯಾಚರಣೆಯನ್ನು ಕೆಲವು ಗಂಟೆಗಳ ಕಾಲ ಸ್ಥಗಿತಗೊಳಿಸಲಾಯಿತು. ಆದರೆ ಕೋರ್ಟ್ ಆದೇಶವು ನಿರ್ದಿಷ್ಟ ಸರ್ವೆ ನಂಬರ್‌ನಲ್ಲಿರುವ ರೆಸ್ಟೋರೆಂಟ್‌ನ ಭಾಗಕ್ಕೆ ಮಾತ್ರ ಸೀಮಿತವಾಗಿದೆ ಎಂದು ಗೋವಾ ಕರಾವಳಿ ವಲಯ ನಿರ್ವಹಣೆ ಪ್ರಾಧಿಕಾರ(GCZMA )ದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರಾವಳಿ ಪ್ರದೇಶಗಳಲ್ಲಿನ ನಿರ್ಮಾಣ ಚಟುವಟಿಕೆಯನ್ನು ನಿಯಂತ್ರಿಸುವ ಕರಾವಳಿ ನಿಯಂತ್ರಣ ವಲಯ (CRZ) ಮಾನದಂಡಗಳನ್ನು ಉಲ್ಲಂಘಿಸಿ ರೆಸ್ಟೋರೆಂಟ್ ನಿರ್ಮಾಣವಾಗಿದ್ದರಿಂದ 2016 ರಲ್ಲಿ GCZMA ರೆಸ್ಟೋರೆಂಟ್ ವಿರುದ್ಧ ಕ್ರಮಕ್ಕೆ ಆದೇಶಿಸಿತು. ಸುಪ್ರೀಂಕೋರ್ಟ್ ಆದೇಶದ ನಂತರ, ನಾವು ನಿರ್ದಿಷ್ಟ ಭಾಗವನ್ನು ಸಮೀಕ್ಷೆ ಮಾಡಿದ್ದೇವೆ ಮತ್ತು ಅದನ್ನು ಡೆಮಾಲಿಷನ್ ಡ್ರೈವ್‌ನಿಂದ ಹೊರಗಿಡಲಾಗಿದೆ. ಕರಾವಳಿ ನಿಯಂತ್ರಣ ವಲಯದ ನಿಯಮಗಳನ್ನು ಉಲ್ಲಂಘಿಸುವ ಉಳಿದ ಭಾಗಗಳನ್ನು ಕೆಡವಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಕರ್ಲೀಸ್ ರೆಸ್ಟೋರೆಂಟ್‌ನ ಸಹ-ಮಾಲೀಕರಾದ ಲೈನೆಟ್ ನ್ಯೂನ್ಸ್, GCZMA ಆದೇಶದ 2016 ರ ಆದೇಶದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮೆಟ್ಟಿಲೇರಿದ್ದರು. ಆದರೆ ಸೆಪ್ಟೆಂಬರ್ 6 ರಂದು ತನ್ನ ಆದೇಶದಲ್ಲಿ ತೆರವು ಕಾರ್ಯಾಚರಣೆ ತಡೆಯಲು ನ್ಯಾಯಮಂಡಳಿ ನಿರಾಕರಿಸಿತ್ತು. ಉತ್ತರ ಗೋವಾ ಜಿಲ್ಲಾಡಳಿತದ ಡೆಮಾಲಿಷನ್ ಸ್ಕ್ವಾಡ್ ಶುಕ್ರವಾರ ಬೆಳಗ್ಗೆ 7.30ಕ್ಕೆ ರೆಸ್ಟೋರೆಂಟ್‌ನ ಭಾಗಗಳನ್ನು ತೆರವು ಮಾಡಲು ಆರಂಭಿಸಿತು. ಆದರೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೆಳಗ್ಗೆ 11.30ರ ಸುಮಾರಿಗೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು.
ಇದನ್ನು ಓದಿ: ಸೋನಾಲಿ ಫೋಗಟ್ ಸಾವು: 'ಕರ್ಲೀಸ್' ರೆಸ್ಟೋರೆಂಟ್ ನೆಲಸಮ ಪ್ರಕ್ರಿಯೆಗೆ 'ಸುಪ್ರೀಂ' ತಡೆ
ತುರ್ತು ತಡೆಯಾಜ್ಞೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಪೀಠವು ನಿರ್ದಿಷ್ಟ ಸರ್ವೆ ನಂಬರ್ ಹೊರತುಪಡಿಸಿ ಬೇರೆ ಭೂಮಿಯಲ್ಲಿ ಅನಧಿಕೃತ ನಿರ್ಮಾಣವನ್ನು ನೆಲಸಮ ಮಾಡಬಹುದು ಎಂದು ಸ್ಪಷ್ಟಪಡಿಸಿದೆ. ಸದ್ಯಕ್ಕೆ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಕರ್ಲೀಸ್ ಮಾಲೀಕರಿಗೆ ಪೀಠ ಹೇಳಿದೆ. ಮುಂದಿನ ವಿಚಾರಣೆವರೆಗೆ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ಲೈನೆಟ್ ನ್ಯೂನ್ಸ್ ಪರ ವಕೀಲ ಗಜಾನನ್ ಕೊರ್ಗಾಂವ್ಕರ್ ಹೇಳಿದ್ದಾರೆ.
ಟಿಕ್‌ಟಾಕ್ ತಾರೆ ಮತ್ತು ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಖ್ಯಾತಿ ಪಡೆದಿದ್ದ ಹರಿಯಾಣದ ಭಾರತೀಯ ಜನತಾ ಪಕ್ಷದ(ಬಿಜೆಪಿ) ನಾಯಕಿ ಸೋನಾಲಿ ಫೋಗಟ್, ಕಳೆದ ತಿಂಗಳು ಸಾಯುವ ಕೆಲ ಗಂಟೆಗಳ ಮುನ್ನ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಿದ್ದರು. ಫೋಗಟ್ ಸಾವಿನ ಪ್ರಕರಣದಲ್ಲಿ ಬಂಧಿತರಾದ ಐವರ ಪೈಕಿ ರೆಸ್ಟೋರೆಂಟ್ ಮಾಲೀಕ ಎಡ್ವಿನ್ ನೂನ್ಸ್ ಸೇರಿದ್ದಾರೆ. ಬಳಿಕ ಅವರಿಗೆ ಜಾಮೀನು ನೀಡಲಾಗಿತ್ತು. ಗೋವಾ ಪೊಲೀಸರ ಪ್ರಕಾರ, ಫೋಗಟ್ ರೆಸ್ಟೋರೆಂಟ್‌ನಲ್ಲಿ ಮಾದಕ ದ್ರವ್ಯ ಸೇವಿಸಿದ್ದರು.