ಬಿಷ್ಣೋಯ್ ಗ್ಯಾಂಗ್ ನ ಟಾರ್ಗೆಟ್ ಲಿಸ್ಟ್ ನಲ್ಲಿ ಸಲ್ಮಾನ್ ಖಾನ್; ಪಂಜಾಬ್ ಡಿಜಿಪಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಟಾರ್ಗೆಟ್ ಲಿಸ್ಟ್ ನಲ್ಲಿದ್ದರು ಎಂದು ಪಂಜಾಬ್ ನ ಪೊಲೀಸ್ ಪ್ರಧಾನ ನಿರ್ದೇಶಕ ಗೌರವ್ ಯಾದವ್ ಹೇಳಿದ್ದಾರೆ.
ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಚಂಡೀಗಢ: ಬಾಲಿವುಡ್ ನಟ ಸಲ್ಮಾನ್ ಖಾನ್ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಟಾರ್ಗೆಟ್ ಲಿಸ್ಟ್ ನಲ್ಲಿದ್ದರು ಎಂದು ಪಂಜಾಬ್ ನ ಪೊಲೀಸ್ ಪ್ರಧಾನ ನಿರ್ದೇಶಕ ಗೌರವ್ ಯಾದವ್ ಹೇಳಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಪಂಜಾಬ್ ಗಾಯಕ ಸಿಧು ಮೂಸೆವಾಲ ಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದು, ಮೂಸೆವಾಲ ಹತ್ಯೆ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಕಪಿಲ್ ಪಂಡಿತ್ ನೀಡಿರುವ ಹೇಳಿಕೆಯಲ್ಲಿ ಸಲ್ಮಾನ್ ಖಾನ್ ಟಾರ್ಗೆಟ್ ಆಗಿದ್ದ ವಿಷಯ ಬಹಿರಂಗವಾಗಿದೆ. ಸಂಪತ್ ನೆಹ್ರಾ ಹಾಗೂ ಕೆನಡಾ ಮೂಲದ ಪರಾರಿಯಾದ ಗೋಲ್ಡಿ ಬ್ರಾರ್ ಎಂಬ ವ್ಯಕ್ತಿಗಳ ಮೂಲಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ್ನು ಸಂಪರ್ಕಿಸಿ ಸಲ್ಮಾನ್ ಖಾನ್ ಹತ್ಯೆ ಮಾಡುವುದರ ಬಗ್ಗೆ ಮಾತನಾಡಿದ್ದರು ಎಂಬ ಮಾಹಿತಿಯನ್ನು ರಾಜ್ಯ ಪೊಲೀಸ್ ಮುಖ್ಯಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.  
 
ಮೂಸೆವಾಲ ಹತ್ಯೆ ಪ್ರಕರಣದಲ್ಲಿ ಮಹಾರಾಷ್ಟ್ರದಿಂದ ಬಂಧನಕ್ಕೆ ಒಳಗಾಗಿದ್ದ ಸಂತೋಷ್ ಜಾಧವ್ ಹಾಗೂ ಅಜೆರ್ಬೈಜಾನ್ ನಲ್ಲಿ ಬಂಧನಕ್ಕೆ ಒಳಗಾಗಿದ್ದ ಸಚಿನ್ ಥಪನ್, ಸಲ್ಮಾನ್ ಖಾನ್ ಹತ್ಯೆಗೆ ನಡೆಸಿದ್ದ ಪಿತೂರಿಯಲ್ಲಿ ಶಾಮೀಲಾಗಿದ್ದರು ಎಂದು ಪೊಲೀಸ್ ಡಿಜಿಪಿ ಹೇಳಿದ್ದಾರೆ. ಮೇ.29 ರಂದು ಸಿಧು ಮೂಸೆವಾಲ ಹತ್ಯೆಯಾದ ಕೆಲವು ದಿನಗಳ ನಂತರ ಸಲ್ಮಾನ್ ಖಾನ್ ಬೆದರಿಕೆಯನ್ನು ಎದುರಿಸಿದ್ದರು. 

ಸಲ್ಮಾನ್ ಖಾನ್ ಹತ್ಯೆಗೆ ಈ ಗ್ಯಾಂಗ್ ವಿಸ್ತೃತವಾದ ಯೋಜನೆ ರೂಪಿಸಿತ್ತು, ಮುಂಬೈ ನಲ್ಲಿ ಸಾಕಷ್ಟು ಸಮಯವನ್ನು ಕಳೆದಿತ್ತು. ತನಿಖೆಯಲ್ಲಿ ಈ ದೃಷ್ಟಿಯಿಂದಲೂ ಪರಿಶೀಲನೆ ನಡೆಸುತ್ತೇವೆ ಎಂದು ಪೊಲೀಸ್ ಅಧಿಕಾರಿ ಯಾದವ್ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಟಾರ್ಗೆಟ್ ಆಗಿದ್ದ ಮಾಹಿತಿ ಪ್ರಾಥಮಿಕವಾಗಿದ್ದು, ಈ ಸಂಬಂಧ ಹೆಚ್ಚಿನ ತನಿಖೆಗೆ ಇಲ್ಲಿನ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ಕಳಿಸುತ್ತೇವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com