ಮುಂಬೈ:ಕೆಲವು ಅನಾಮಿಕ ದುಷ್ಕರ್ಮಿಗಳು ಅದಾರ್ ಪೂನಾವಾಲ ಹೆಸರಿನಲ್ಲಿ ಲಸಿಕೆ ತಯಾರಿಕಾ ಸಂಸ್ಥೆ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ 1 ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ.
ವಂಚಕರು ಸಂಸ್ಥೆಯ ಸಿಇಒ ಅದಾರ್ ಪೂನಾವಾಲ ಹೆಸರಿನಲ್ಲೇ ವಂಚನೆ ಮಾಡಿದ್ದು, ಸಂಸ್ಥೆಯ ನಿರ್ದೇಶಕರ ಪೈಕಿ ಓರ್ವರಾಗಿರುವ ಸತೀಶ್ ದೇಶಪಾಂಡೆ ಎಂಬುವವರಿಗೆ ಪೂನಾವಾಲ ಸೋಗಿನಲ್ಲಿದ್ದ ವ್ಯಕ್ತಿ ವಾಟ್ಸ್ ಆಪ್ ಮೆಸೇಜ್ ಕಳಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ತಕ್ಷಣವೇ ಹಣ ವರ್ಗಾವಣೆ ಮಾಡುವಂತೆ ಸೂಚಿಸಿದ್ದಾರೆ. ಮೆಸೇಜ್ ಗಳು ಪೂನಾವಾಲ ಅವರದ್ದೇ ಎಂದು ನಂಬಿದ ಸತೀಶ್ ದೇಶಪಾಂಡೆ, ವಿವಿಧ ಬ್ಯಾಂಕ್ ಖಾತೆಗಳಿಗೆ ಹಲವು ವಹಿವಾಟುಗಳಲ್ಲಿ 1,01,01,554 ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ಆ ಬಳಿಕ ಮೋಸ ಹೋಗಿರುವುದು ಗೊತ್ತಾಗಿದೆ.
ಅದಾರ್ ಪೂನಾವಾಲ ಈ ರೀತಿಯ ಯಾವುದೇ ಮೆಸೇಜ್ ಗಳನ್ನೂ ಕಳಿಸಲಿಲ್ಲ ಎಂಬುದು ದೃಢವಾಗುತ್ತಿದ್ದಂತೆಯೇ ಎಸ್ಐಐ ಹಣಕಾಸು ವಿಭಾಗದ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದು ಐಪಿಸಿ ಸೆಕ್ಷನ್ 419, 420, 34 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.
Advertisement