ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್-ಅಶೋಕ್ ಗೆಹ್ಲೋಟ್ ನಡುವೆ ಸ್ಪರ್ಧೆ?

ಈ ಬಾರಿ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಗಾಂಧಿ ಕುಟುಂಬದ ಸದಸ್ಯರು ತುಂಬುವುದಿಲ್ಲ ಎಂಬುದು ಪಕ್ಕಾ ಆಗ್ತಿದ್ದಂತೆ ಪಕ್ಷದ ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಶಶಿತರೂರ್ ಅವರಿಗೆ ಸೋನಿಯಾಗಾಂಧಿಯವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಶಶಿ ತರೂರ್-ಅಶೋಕ್ ಗೆಹ್ಲೋಟ್
ಶಶಿ ತರೂರ್-ಅಶೋಕ್ ಗೆಹ್ಲೋಟ್

ನವದೆಹಲಿ: ಈ ಬಾರಿ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಗಾಂಧಿ ಕುಟುಂಬದ ಸದಸ್ಯರು ತುಂಬುವುದಿಲ್ಲ ಎಂಬುದು ಪಕ್ಕಾ ಆಗ್ತಿದ್ದಂತೆ ಪಕ್ಷದ ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಶಶಿತರೂರ್ ಅವರಿಗೆ ಸೋನಿಯಾಗಾಂಧಿಯವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮುಂದಿನ ತಿಂಗಳು ನಡೆಯಲಿರುವ ಆಂತರಿಕ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಂದ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಪಕ್ಷ ಬದಲಾವಣೆಯ ಉತ್ಕಟ ಪ್ರತಿಪಾದಕರಲ್ಲಿ ಒಬ್ಬರಾದ ಶಶಿ ತರೂರ್ ಅವರಿಗೆ ಒಪ್ಪಿಗೆ ನೀಡಿದ್ದಾರೆ. ಅವರ ಎದುರಾಳಿ ಅಶೋಕ್ ಗೆಹ್ಲೋಟ್ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ಜಿ-23 ಅಥವಾ 23 ನಾಯಕರ ಗುಂಪಿನ ಪ್ರಮುಖ ಸದಸ್ಯ ಶಶಿ ತರೂರ್, 2020 ರಲ್ಲಿ ಸೋನಿಯಾ ಗಾಂಧಿಗೆ ಆಂತರಿಕ ಸುಧಾರಣೆಗಳಿಗೆ ಕರೆ ನೀಡುವಂತೆ ಪತ್ರ ಬರೆದಿದ್ದು, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸುಳಿವು ನೀಡಿದ್ದರು. ಗಾಂಧಿ ಕುಟುಂಬದ ನಿಷ್ಠಾವಂತರಾಗಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಅಕ್ಟೋಬರ್ 25 ರಂದು ದೆಹಲಿಗೆ ಭೇಟಿ ನೀಡಲಿದ್ದು ಮರುದಿನ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎರಡು ದಶಕಗಳಲ್ಲಿ ಗಾಂಧಿಯೇತರರೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಇದೇ ಮೊದಲು. ವಿದೇಶದಲ್ಲಿ ವೈದ್ಯಕೀಯ ತಪಾಸಣೆಯ ನಂತರ ಹಿಂತಿರುಗಿರುವ ಸೋನಿಯಾ ಗಾಂಧಿಯವರೊಂದಿಗೆ ಇಂದು ಮಧ್ಯಾಹ್ನ ನಡೆದ ಸಭೆಯಲ್ಲಿ ಶಶಿ ತರೂರ್ ಅವರು ಸ್ಪರ್ಧಿಸುವ ನಿರ್ಧಾರವನ್ನು ತಿಳಿಸಿದರು.

2019 ರ ಚುನಾವಣಾ ಸೋಲಿನ ನಂತರ ಅವರ ಮಗ ರಾಹುಲ್ ಗಾಂಧಿ ಅವರು ಸ್ಥಾನದಿಂದ ಕೆಳಗಿಳಿದ ನಂತರ ಸೋನಿಯಾ ಗಾಂಧಿ ಅವರು ಪಕ್ಷದ ಹಂಗಾಮಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಪ್ರಸ್ತುತ ಪಕ್ಷದ “ಭಾರತ್ ಜೋಡೋ” ಯಾತ್ರೆಯನ್ನು ಮುನ್ನಡೆಸುತ್ತಿರುವ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರ ಒಂದು ವಿಭಾಗದಿಂದ ಪಟ್ಟುಬಿಡದ ಬೇಡಿಕೆಯ ಹೊರತಾಗಿಯೂ ಅಧ್ಯಕ್ಷರಾಗಿ ಮರಳಲು ದೃಢವಾಗಿ ನಿರಾಕರಿಸಿದ್ದಾರೆ. ರಾಹುಲ್ ಗಾಂಧಿಯವರು ಹಿಂದಿರುಗಲು ಒತ್ತಾಯಿಸುತ್ತಿರುವ ನಾಯಕರಲ್ಲಿ ಗೆಹ್ಲೋಟ್ ಅವರು ಒಬ್ಬರು.

ಕಳೆದ ವಾರ ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರಕ್ಕೆ ಪತ್ರ ಬರೆದು ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆ ಯನ್ನು ಬಯಸಿದ ನಾಯಕರಲ್ಲಿ ಶಶಿ ತರೂರ್ ಕೂಡ ಒಬ್ಬರು. ಮತದಾರರ ಪಟ್ಟಿಯನ್ನು ಬಹಿರಂಗಗೊಳಿಸುವಂತೆ ಕೇಳಿದ ಮುಖಂಡರಲ್ಲಿ ಅವರೂ ಸೇರಿದ್ದಾರೆ. ಇಂದು ಬೆಳಿಗ್ಗೆ ಶಶಿ ತರೂರ್ ಅವರು ಯುವ ಪಕ್ಷದ ಸದಸ್ಯರ ಗುಂಪು ಪುನರುಜ್ಜೀವನಕ್ಕೆ ಕರೆ ನೀಡಿದ್ದ ಮನವಿಗೆ ಸಹಿ ಹಾಕಿದ್ದರು. ಎರಡು ವರ್ಷಗಳ ಸುದೀರ್ಘ ಅವಧಿಯ ನಂತರ ಮುಂದಿನ ತಿಂಗಳು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇನ್ನು ಮೂರು ದಿನಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

ಕಪಿಲ್ ಸಿಬಲ್, ಜೈವೀರ್ ಶೆರ್ಗಿಲ್, ಸುನಿಲ್ ಜಾಖರ್, ಅಮರಿಂದರ್ ಸಿಂಗ್, ಆರ್‌ಪಿಎನ್ ಸಿಂಗ್, ಅಶ್ವನಿ ಕುಮಾರ್ ಮತ್ತು ಹಾರ್ದಿಕ್ ಪಟೇಲ್ ಸೇರಿದಂತೆ ಹಲವಾರು ಪ್ರಮುಖ ನಾಯಕರು ಕಳೆದ ವರ್ಷದಿಂದ ನಿರ್ಗಮಿಸಿದ ನಂತರ ಚುನಾವಣೆಗಳು ನಡೆಯಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com