ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ರಾಜಸ್ತಾನ ಸಿಎಂ ಹುದ್ದೆಯಿಂದ ಗೆಹ್ಲೊಟ್ ಕೆಳಗಿಳಿಯುವ ಸಾಧ್ಯತೆ, ಶಶಿ ತರೂರ್ ಗೆ ಕಾರ್ಯಕಾರಿ ಸಮಿತಿ ಸ್ಥಾನ ಸಾಧ್ಯತೆ

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆಯ ಭವಿಷ್ಯವನ್ನು ಲೆಕ್ಕಿಸದೆಯೇ ಶಶಿ ತರೂರ್ ಅವರು ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ (CWC) ಸ್ಥಾನ ಪಡೆಯಬಹುದು.
ಅಶೋಕ್ ಗೆಹ್ಲೊಟ್-ಶಶಿ ತರೂರ್
ಅಶೋಕ್ ಗೆಹ್ಲೊಟ್-ಶಶಿ ತರೂರ್

ತಿರುವನಂತಪುರಂ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆಯ ಭವಿಷ್ಯವನ್ನು ಲೆಕ್ಕಿಸದೆಯೇ ಶಶಿ ತರೂರ್ ಅವರು ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ (CWC) ಸ್ಥಾನ ಪಡೆಯಬಹುದು.

ಕೇರಳದ ತಿರುವನಂತಪುರಂ ಸಂಸದರಾಗಿರುವ ಶಶಿ ತರೂರ್  ಈ ವಾರದ ಆರಂಭದಲ್ಲಿ ಎಐಸಿಸಿ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದ ವೇಳೆ ಈ ನಿರ್ಧಾರ ತೆಗೆದುಕೊಂಡರು ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ಸಿಕ್ಕಿದೆ.

ತರೂರ್ ಅವರು ಜಿ 23 ಗುಂಪಿನೊಂದಿಗೆ ಇದ್ದಾಗಲೂ ಗಾಂಧಿ ಕುಟುಂಬದೊಂದಿಗೆ ಆತ್ಮೀಯ ಸಂಬಂಧವನ್ನು ಕಾಪಾಡಿಕೊಂಡು ಬಂದಿದ್ದರು. ಹೈಕಮಾಂಡ್  ಸಹ ಅವರ ಸಾಮರ್ಥ್ಯದ ಬಗ್ಗೆ ತಿಳಿದುಕೊಂಡಂತಿದೆ. ಶಶಿ ತರೂರ್ ಕಾಂಗ್ರೆಸ್ ತೊರೆಯಲು ನಿರ್ಧರಿಸಿದರೆ ಅದರಿಂದ ಪಕ್ಷಕ್ಕೆ ಹಾನಿಯುಂಟಾಗಬಹುದು ಎಂದು ಮನಗಂಡಿದೆ ಎನ್ನಲಾಗುತ್ತಿದೆ. ತರೂರ್ ಅವರನ್ನು ಉತ್ತಮ ಮನಸ್ಥಿತಿಯಲ್ಲಿ ಇರಿಸಲು CWC ಸ್ಥಾನವು ಸಾಕು ಎಂದು ಹೈಕಮಾಂಡ್ ಭಾವಿಸಿದೆ. 

ರಾಜಸ್ಥಾನ ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಅಶೋಕ್ ಗೆಹ್ಲೋಟ್ ಅವರನ್ನು ಮನವೊಲಿಸುವಲ್ಲಿ ಗಾಂಧಿ ಕುಟುಂಬವು ಯಶಸ್ವಿಯಾಗಿದ್ದು, ಆ ಸ್ಥಾನವನ್ನು ಸಚಿನ್ ಪೈಲಟ್‌ಗೆ ಹಸ್ತಾಂತರಿಸಿದೆ. ಒಪ್ಪಂದದ ಪ್ರಕಾರ ಎಐಸಿಸಿ ಚುನಾವಣೆ ವೇಳೆಗೆ ಗೆಹ್ಲೋಟ್ ರಾಜೀನಾಮೆ ನೀಡುವ ಸಾಧ್ಯತೆ ಇದೆ. 71 ವರ್ಷದ ರಾಜಸ್ಥಾನ ಸ್ಪೀಕರ್ ಸಿಪಿ ಜೋಶಿ ಅವರನ್ನು ಸಿಎಂ ಮಾಡಲು ಮಾಡಿದ ಒತ್ತಡ ತಂತ್ರಗಳು ಫಲ ನೀಡಲಿಲ್ಲ.

ಎರಡೂ ಹುದ್ದೆಗಳನ್ನು ನಿಭಾಯಿಸಬಲ್ಲೆ ಎಂದು ರಾಹುಲ್‌ಗೆ ಮನವರಿಕೆ ಮಾಡಿಕೊಡಲು ಗೆಹ್ಲೋಟ್ ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಿಯಾಂಕಾ ಗಾಂಧಿ ಕೂಡ ಪೈಲಟ್ ಸಿಎಂ ಆಗಬೇಕೆಂದು ಹಠ ಹಿಡಿದಿದ್ದರು. ಉದಯಪುರ ಚಿಂತನ ಶಿಬಿರದಲ್ಲಿ ಕೈಗೊಂಡ 'ಒಬ್ಬ ವ್ಯಕ್ತಿ, ಒಂದೇ ಹುದ್ದೆ’ ನಿರ್ಧಾರವನ್ನು ಪ್ರಸ್ತಾಪಿಸಿದ ರಾಹುಲ್ ಕೊಚ್ಚಿಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

2018 ರಲ್ಲಿ ಗೆಹ್ಲೋಟ್ ಮೂರನೇ ಬಾರಿಗೆ ಸಿಎಂ ಆದ ನಂತರ ಸಚಿನ್ ಪೈಲಟ್ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಪಕ್ಕಕ್ಕೆ ಸರಿದಿದ್ದಾರೆ ಎಂಬ ಭಾವನೆ ಇದೆ. ಡಿಸೆಂಬರ್ 2023 ರಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ ಪೈಲಟ್ ಅವರನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ. ಇದಲ್ಲದೆ, ರಾಹುಲ್ ಅವರ ಪಾದಯಾತ್ರೆ 21 ದಿನ ರಾಜಸ್ತಾನದಲ್ಲಿ ನಡೆಯಲಿದೆ. ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟು ಮುಂದುವರಿದರೆ, ಅದು ಅವರ ಯಾತ್ರೆಗೆ ಕಳಂಕ ತರುತ್ತದೆ ಎಂದು ಪೈಲಟ್ ಅವರ ಆಪ್ತಮೂಲಗಳು ತಿಳಿಸಿವೆ. 

ಎಐಸಿಸಿ ನೂತನ ಅಧ್ಯಕ್ಷರಿಗೆ ರಾಹುಲ್ ಸಲಹೆ
ಹೊಸ ಎಐಸಿಸಿ ಮುಖ್ಯಸ್ಥರು ಯಾರೇ ಆಗಲಿ, ಅದು ಕೇವಲ ಸಾಂಸ್ಥಿಕ ಹುದ್ದೆಯಲ್ಲ ಬದಲಾಗಿ ಸೈದ್ಧಾಂತಿಕ ಹುದ್ದೆ ಎಂಬುದನ್ನು ಅರ್ಥೈಸಿಕೊಂಡು ನಡೆಸಿಕೊಂಡು ಹೋಗಬೇಕೆಂಬುದು ರಾಹುಲ್ ಗಾಂಧಿಯವರ ಸಲಹೆಯಾಗಿದೆ. ಹುದ್ದೆ ನಂಬಿಕೆಯ ವ್ಯವಸ್ಥೆ ಎಂದು ಕೊಚ್ಚಿಯಲ್ಲಿ ಭಾರತ್ ಜೋಡೋ ಪಾದಯಾತ್ರೆ ವೇಳೆ ರಾಹುಲ್ ಗಾಂಧಿಯವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com