ಬಂಡಾಯದ ನಂತರ ಮೊದಲ ಬಾರಿಗೆ ಉದ್ಧವ್ ಠಾಕ್ರೆಗೆ ಗೆಲುವು: ಕೋಟ್‌ನಲ್ಲಿ ಶಿಂಧೆ ಬಣಕ್ಕೆ ಮುಖಭಂಗ!

ಮಹಾರಾಷ್ಟ್ರದಲ್ಲಿ ಸೇನೆ ವರ್ಸಸ್ ಸೇನೆ ನಡುವಿನ ಆಂತರಿಕ ಯುದ್ಧದಲ್ಲಿ ಮೊದಲ ಬಾರಿ ಶಿಂಧೆ ಬಣಕ್ಕೆ ಹಿನ್ನೆಡೆಯಾಗಿದೆ.
ಉದ್ಧವ್ ಠಾಕ್ರೆ-ಏಕನಾಥ್ ಶಿಂಧೆ
ಉದ್ಧವ್ ಠಾಕ್ರೆ-ಏಕನಾಥ್ ಶಿಂಧೆ

ಮುಂಬೈ: ಮಹಾರಾಷ್ಟ್ರದಲ್ಲಿ ಸೇನೆ ವರ್ಸಸ್ ಸೇನೆ ನಡುವಿನ ಆಂತರಿಕ ಯುದ್ಧದಲ್ಲಿ ಮೊದಲ ಬಾರಿ ಶಿಂಧೆ ಬಣಕ್ಕೆ ಹಿನ್ನೆಡೆಯಾಗಿದೆ. ಮುಂಬೈನ ಐಕಾನಿಕ್ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ್ಯಾಲಿ ಆಯೋಜಿಸಲು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಬಾಂಬೆ ಹೈಕೋರ್ಟ್ ಅನುಮತಿ ನೀಡುವುದರೊಂದಿಗೆ ಶಿವಸೇನೆಯ ಏಕನಾಥ್ ಶಿಂಧೆ ಬಣಕ್ಕೆ ಇಂದು ದೊಡ್ಡ ಹೊಡೆತ ಬಿದ್ದಿದೆ. ಕಕ್ಷಿದಾರರ ಹಕ್ಕು ವಿವಾದ ಇತ್ಯರ್ಥವಾಗುವವರೆಗೆ ಅರ್ಜಿಯ ಕುರಿತು ತೀರ್ಮಾನಿಸದಂತೆ ಶಿಂಧೆ ಬಣದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ಮುಂಬೈ ಪೊಲೀಸರು ಎತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯ ಕಾಳಜಿಯ ಆಧಾರದ ಮೇಲೆ ಐಕಾನಿಕ್ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ್ಯಾಲಿ ನಡೆಸಲು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹಾಗೂ ಏಕನಾಥ್ ಶಿಂಧೆ ಬಣಕ್ಕೆ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಈ ಹಿಂದೆ ಅನುಮತಿ ನಿರಾಕರಿಸಿತ್ತು. ಠಾಕ್ರೆ ಬಣವು BMC ನಿರ್ಧಾರವನ್ನು ಪ್ರಶ್ನಿಸಿತು, ಶಿಂಧೆ ಬಣವು ಮಧ್ಯಪ್ರವೇಶಿಸುವಂತೆ ಮನವಿ ಮಾಡಿತು.

ಶಿಂಧೆ ಬಣದ ಭಾಗವಾಗಿರುವ ದಾದರ್ ಶಾಸಕ ಸದಾ ಸರ್ವಾಂಕರ್, ಪ್ರಸ್ತುತ ಅರ್ಜಿಯ ಅಡಿಯಲ್ಲಿ ಅರ್ಜಿದಾರರು (ಠಾಕ್ರೆ ನೇತೃತ್ವದ ಶಿವಸೇನೆ) ಪಕ್ಷದ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದರು. ಮಧ್ಯ ಮುಂಬೈನಲ್ಲಿರುವ ಶಿವಾಜಿ ಪಾರ್ಕ್‌ನಲ್ಲಿ ಶಿವಸೇನೆಯ ವಾರ್ಷಿಕ ದಸರಾ ರ್ಯಾಲಿಯನ್ನು ನಡೆಸಲು ಅನುಮತಿ ಕೋರಿ ಆಗಸ್ಟ್ 30ರಂದು ಮುಂಬೈ ನಾಗರಿಕ ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಸದಾ ಸರ್ವಾಂಕರ್ ಹೇಳಿದರು.

ಶಿವಸೇನೆಯ ಬಹುಮತದ ಬೆಂಬಲ ಏಕನಾಥ್ ಶಿಂಧೆ ಅವರಿಗಿದೆ. ಉದ್ಧವ್ ಠಾಕ್ರೆ ಅವರಿಗೆ ಪಕ್ಷದೊಳಗೆ ಯಾವುದೇ ಬೆಂಬಲವಿಲ್ಲ ಎಂದು ಅವರು ಹೇಳಿದ್ದಾರೆ. ದಾದರ್ ಶಾಸಕರು ಗುರುವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಅರ್ಜಿಯನ್ನು ನ್ಯಾಯಾಲಯವು ಆಲಿಸಬಾರದು ಅಥವಾ ತೀರ್ಮಾನಿಸಬಾರದು ಎಂದು ಕೋರಿದ್ದರು.

ಮುಂಬೈ ಪೊಲೀಸರು ಎತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಕಾಳಜಿಯ ಆಧಾರದ ಮೇಲೆ ಐಕಾನಿಕ್ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ್ಯಾಲಿ ನಡೆಸಲು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹಾಗೂ ಏಕನಾಥ್ ಶಿಂಧೆ ಬಣಕ್ಕೆ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನಿನ್ನೆ ಅನುಮತಿ ನಿರಾಕರಿಸಿತ್ತು.

ಶಿವಾಜಿ ಮಹಾರಾಜ್ ಪಾರ್ಕ್ ಮೈದಾನದಲ್ಲಿ ದಸರಾ ರ್ಯಾಲಿ ನಡೆಸಲು ಎದುರಾಳಿ ಅಭ್ಯರ್ಥಿಗಳಿಬ್ಬರೂ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ಯಾರಿಗಾದರೂ ರ್ಯಾಲಿ ನಡೆಸಲು ಅನುಮತಿ ನೀಡಿದರೆ, ಶಿವಾಜಿ ಪಾರ್ಕ್‌ನಸೂಕ್ಷ್ಮ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ಗಂಭೀರ ಸಮಸ್ಯೆ ಉಂಟಾಗಬಹುದು ಎಂದು ಪೊಲೀಸರ ಉತ್ತರವನ್ನು ಎರಡೂ ಬಣಗಳಿಗೆ ಕಳುಹಿಸಿರುವ ಬಿಎಂಸಿಯ ಪತ್ರದಲ್ಲಿ ತಿಳಿಸಲಾಗಿದೆ.

ಶಿವಸೇನೆಯು 1966ರಿಂದ ಪ್ರತಿ ವರ್ಷ ದಸರಾದಂದು ರ್ಯಾಲಿಯನ್ನು ನಡೆಸುತ್ತಿದೆ. ಈ ವರ್ಷ ಈ ಕಾರ್ಯಕ್ರಮವು ಮಹತ್ವದ್ದಾಗಿದೆ, ಏಕೆಂದರೆ ಸೇನೆಯು ಈಗ ಎರಡು ಬಣಗಳಾಗಿ ವಿಭಜನೆಯಾಗಿದೆ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2020 ಮತ್ತು 2021ರಲ್ಲಿ ರ್ಯಾಲಿಯನ್ನು ನಡೆಸಲಾಗಿಲ್ಲ.

ಉದ್ಧವ್ ಠಾಕ್ರೆ ಅವರು ಆಗಸ್ಟ್‌ನಲ್ಲಿ ಶಿಂಧೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಪಕ್ಷವು ಅನುಮತಿ ಪಡೆಯುತ್ತದೆಯೇ ಎಂದು ಖಚಿತವಾಗಿಲ್ಲ . ಏನೇ ಆಗಲಿ ಶಿವಾಜಿ ಪಾರ್ಕ್‌ನಲ್ಲಿ ದಸರಾ ರ್ಯಾಲಿ ನಡೆಸುವುದಾಗಿ ಠಾಕ್ರೆ ಹೇಳಿದ್ದರು.

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಶಿವಸೇನೆಯ ದಸರಾ ರ‍್ಯಾಲಿ ನಡೆಯಲಿದೆ. ಈ ರ್ಯಾಲಿಗೆ ರಾಜ್ಯದೆಲ್ಲೆಡೆಯಿಂದ ಶಿವಸೈನಿಕರು ಆಗಮಿಸುತ್ತಾರೆ.ಸರಕಾರ ಅನುಮತಿ ನೀಡುತ್ತದೋ ಇಲ್ಲವೋ ಎಂಬ ತಾಂತ್ರಿಕ ವಿಷಯಗಳು ನಮಗೆ ತಿಳಿದಿಲ್ಲ. ರ್ಯಾಲಿ ನಡೆಸುತ್ತೇವೆ. ಇತರರು ರ್ಯಾಲಿಗಳನ್ನು ನಡೆಸುತ್ತಾರೆಯೇ ಅಥವಾ ಇಲ್ಲವೇ ಎಂಬುದು ನಮಗೆ ಮುಖ್ಯವಲ್ಲ.

ಶಿವಸೇನೆಯು ದೇಶದ್ರೋಹಿಗಳಿಂದಲ್ಲ, ಆದರೆ ಶಿವಸೈನಿಕರ ರಕ್ತದಿಂದ ಬೆಳೆದಿದೆ ಎಂದು ಠಾಕ್ರೆ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು. ಅಕ್ಟೋಬರ್ 5 ರಂದು ನಡೆಯಲಿರುವ ರ್ಯಾಲಿಯಲ್ಲಿ ಅವರು ಮಹಾರಾಷ್ಟ್ರದ ಬೆಳವಣಿಗೆಗಳ ಕುರಿತು ದೊಡ್ಡ ಭಾಷಣ ಮಾಡುವ ನಿರೀಕ್ಷೆಯಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂಧೆ ನೇತೃತ್ವದ ಬಂಡಾಯ ಶಿಬಿರವು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ರ್ಯಾಲಿಗೆ ಈಗಾಗಲೇ ಅನುಮತಿ ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com