ಉತ್ತರಾಖಂಡ: ರೆಸಾರ್ಟ್ ರಿಸೆಪ್ಷನಿಸ್ಟ್ ಹತ್ಯೆ ಪ್ರಕರಣ; ಆರೋಪಿಯ ತಂದೆ, ಸಹೋದರ ಬಿಜೆಪಿಯಿಂದ ಉಚ್ಛಾಟನೆ

ರೆಸಾರ್ಟ್ ನಲ್ಲಿ  ರಿಸೆಪ್ಷನಿಸ್ಟ್ ಆಗಿದ್ದ ೧೯ ವರ್ಷದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಚಿವರ ಮಗ ಸೇರಿದಂತೆ ನಾಲ್ವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಅಕ್ರಮ ರೆಸಾರ್ಟ್ ಅನ್ನು...
ಪುಲ್ಕಿತ್ ಆರ್ಯ ಒಡೆತನದ ರೆಸಾರ್ಟ್‌ಗೆ ಸ್ಥಳೀಯರು ಬೆಂಕಿ ಹಚ್ಚಿದ್ದಾರೆ.(ಫೋಟೋ | ಟ್ವಿಟ್ಟರ್)
ಪುಲ್ಕಿತ್ ಆರ್ಯ ಒಡೆತನದ ರೆಸಾರ್ಟ್‌ಗೆ ಸ್ಥಳೀಯರು ಬೆಂಕಿ ಹಚ್ಚಿದ್ದಾರೆ.(ಫೋಟೋ | ಟ್ವಿಟ್ಟರ್)

ಡೆಹ್ರಾಡೂನ್: ರೆಸಾರ್ಟ್ ನಲ್ಲಿ  ರಿಸೆಪ್ಷನಿಸ್ಟ್ ಆಗಿದ್ದ ೧೯ ವರ್ಷದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಚಿವರ ಮಗ ಸೇರಿದಂತೆ ನಾಲ್ವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಅಕ್ರಮ ರೆಸಾರ್ಟ್ ಅನ್ನು ನೆಲಸಮಗೊಳಿಸಲಾಗಿದೆ.

ರೆಸಪ್ಷನಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿಯ ಮೃತದೇಹ ಪತ್ತೆಯಾಗಿದ್ದು, ನಾಪತ್ತೆಯಾಗಿ ಐದು ದಿನಗಳ ಬಳಿಕ ಮೃತದೇಹ ದೊರೆತಿದೆ. ಬಿಜೆಪಿ ಮುಖಂಡ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಅವರು ರೆಸಾರ್ಟ್ ಸಿಬ್ಬಂದಿಗಳ ಸಸಹಾಯದಿಂದ ಯುವತಿಯ ಹತ್ಯೆಗೈದಿದ್ದಾರೆ ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ವಿನೋದ್ ಆರ್ಯ ಮತ್ತು ಅವರ ಮತ್ತೊಬ್ಬ ಪುತ್ರ ಅಂಕಿತ್ ಅವರನ್ನು ಬಿಜೆಪಿಯಿಂದ  ಉಚ್ಛಾಟಿಸಲಾಗಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್ ಅವರ ಆದೇಶದ ಮೇರೆಗೆ ವಿನೋದ್ ಆರ್ಯ ಮತ್ತು ಅಂಕಿತ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷದ ಮಾಧ್ಯಮ ಉಸ್ತುವಾರಿ ಮನ್ವೀರ್ ಚೌಹಾಣ್ ಅವರು ತಿಳಿಸಿದ್ದಾರೆ.

ಹರಿದ್ವಾರದ ಪಕ್ಷದ ನಾಯಕ ವಿನೋದ್ ಆರ್ಯ ಅವರು ಈ ಹಿಂದೆ ಉತ್ತರಾಖಂಡ್ ಮತಿ ಮಂಡಳಿಯ ಅಧ್ಯಕ್ಷರಾಗಿ ರಾಜ್ಯ ಸಚಿವ ಸಂಪುಟ ದರ್ಜೆ ಸ್ಥಾನಮಾನ ಹೊಂದಿದ್ದರು.

ಇನ್ನು ಆರೋಪಿ ಪುಲ್ಕಿತ್ ಅವರ ಸಹೋದರ ಅಂಕಿತ್ ರಾಜ್ಯ ಒಬಿಸಿ ಆಯೋಗದ ಉಪಾಧ್ಯಕ್ಷರಾಗಿದ್ದಾರೆ.

ಪುಲ್ಕಿತ್ ಆರ್ಯ ಒಡೆತನದ ರೆಸಾರ್ಟ್‌ನ ಕೆಲವು ಭಾಗಗಳನ್ನು ಸರ್ಕಾರ ನೆಲಸಮಗೊಳಿಸಿದ ಒಂದು ದಿನದ ನಂತರ, ಆಕ್ರೋಶಗೊಂಡ ಸ್ಥಳೀಯರು ಇಡೀ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದರು.

ಉತ್ತರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಈ ಹತ್ಯೆಯ ತನಿಖೆಗೆ ವಿಶೇಷ ತನಿಖಾ ತಂಡ(ಎಸ್ ಐಟಿ) ನೇಮಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಅಂಕಿತಾ ಅವರ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಹೃದಯ ವಿದ್ರಾವಕ ಘಟನೆಯಿಂದ ನನಗೆ ನೋವಾಗಿದೆ. ಡಿಐಜಿ ಪಿ ರೇಣುಕಾ ದೇವಿ ಅವರ ನೇತೃತ್ವದ ಅಡಿ ವಿಶೇಷ ತನಿಖಾ ದಳ ತಂಡ ರಚಿಸಲಾಗಿದ್ದು, ತನಿಖೆಗೆ ಆದೇಶಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com