ರಾಜಸ್ಥಾನ ರಾಜಕೀಯದಲ್ಲಿ ಹೈಡ್ರಾಮಾ: ಸಚಿನ್ ಸಿಎಂ ಆಗಬಾರದು; ಗೆಹ್ಲೋಟ್ ಬೆಂಬಲಿತ ಶಾಸಕರಿಂದ ರಾಜಿನಾಮೆ ಬೆದರಿಕೆ!
ರಾಜಸ್ಥಾನದಲ್ಲಿ ಕಾಂಗ್ರೆಸ್ ನ ಆಂತರಿಕ ಬಿಕ್ಕಟ್ಟು ಗಣನೀಯವಾಗಿ ಹೆಚ್ಚಿದೆ. ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಮಾಡುವ ಚರ್ಚೆಯ ನಡುವೆ ಅಶೋಕ್ ಗೆಹ್ಲೋಟ್ ಬೆಂಬಲಿಗ ಶಾಸಕರು ಬಂಡಾಯ ಸಾರಿದ್ದಾರೆ.
Published: 25th September 2022 11:41 PM | Last Updated: 25th September 2022 11:41 PM | A+A A-

ಗೆಹ್ಲೋಟ್-ರಾಹುಲ್ ಗಾಂಧಿ-ಸಚಿನ್ ಪೈಲಟ್
ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್ ನ ಆಂತರಿಕ ಬಿಕ್ಕಟ್ಟು ಗಣನೀಯವಾಗಿ ಹೆಚ್ಚಿದೆ. ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಮಾಡುವ ಚರ್ಚೆಯ ನಡುವೆ ಅಶೋಕ್ ಗೆಹ್ಲೋಟ್ ಬೆಂಬಲಿಗ ಶಾಸಕರು ಬಂಡಾಯ ಸಾರಿದ್ದಾರೆ.
ಸಿಎಂ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದು ಅವರ ಉತ್ತರಾಧಿಕಾರಿಯಾಗಿ ಯುವ ನಾಯಕ ಸಚಿನ್ ಪೈಲಟ್ ಆಗುತ್ತಾರೆ ಎಂಬುದು ಸ್ಪಷ್ಟವಾಗಿತ್ತು. ಆದರೆ ಇದೀಗ ಶಾಸಕರು ಅಶೋಕ್ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿಯಾಗಿ ಉಳಿಸಿಕೊಳ್ಳುವಂತೆ ಒತ್ತಡ ಹೇರುತ್ತಿದ್ದು ಇಲ್ಲದಿದ್ದರೆ 90ಕ್ಕೂ ಹೆಚ್ಚು ಶಾಸಕರು ಸ್ಪೀಕರ್ ಸಿಪಿ ಜೋಶಿ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಮೂಲಗಳ ಪ್ರಕಾರ, ಈ ಶಾಸಕರು ಶಾಸಕಾಂಗ ಪಕ್ಷದ ಸಭೆಗೆ ಬಂದಿಲ್ಲ. ಈ ಬೆಳವಣಿಗೆ ನಂತರ ಶಾಸಕಾಂಗ ಪಕ್ಷದ ಸಭೆಯನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಮುಖ್ಯಮಂತ್ರಿ ನಿವಾಸದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ವೀಕ್ಷಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಸಂಜೆ 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದರು.
ಇಂದಿನಿಂದ ರಾಜ್ಯದ ಮುಖ್ಯಮಂತ್ರಿ ಹೆಸರನ್ನು ನಿರ್ಧರಿಸುವ ಪ್ರಕ್ರಿಯೆಯೂ ಆರಂಭವಾಗಿತ್ತು. ಇದಕ್ಕಾಗಿ ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಇದರಲ್ಲಿ ಕಾಂಗ್ರೆಸ್ ಸೇರಿದಂತೆ ಸರ್ಕಾರವನ್ನು ಬೆಂಬಲಿಸುವ ಕೆಲವು ಶಾಸಕರನ್ನು ಕರೆಸಲಾಯಿತು. ಸಭೆಯಲ್ಲಿ ಪಾಲ್ಗೊಳ್ಳಲು ರಾಜ್ಯ ಉಸ್ತುವಾರಿ ಅಜಯ್ ಮಾಕನ್ ಮತ್ತು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಜೈಪುರಕ್ಕೆ ಬಂದಿದ್ದರು. ಇಬ್ಬರೂ ನಾಯಕರನ್ನು ವೀಕ್ಷಕರನ್ನಾಗಿ ಮಾಡಲಾಗಿದೆ. ಈ ಇಬ್ಬರೂ ನಾಯಕರು ಶಾಸಕರ ಜತೆ ಮಾತುಕತೆ ನಡೆಸಿ ಮುಖ್ಯಮಂತ್ರಿ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲಿದ್ದಾರೆ.
ರಾಜಸ್ಥಾನದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಯಿಂದ ಕಾಂಗ್ರೆಸ್ ಹೈಕಮಾಂಡ್ ಗೆ ತಲೆನೋವು ಶುರುವಾಗಿದೆ. ಹೀಗಾಗಿ ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ವೀಕ್ಷಕರಿಗೆ ಪರಿಸ್ಥಿತಿ ನಿಭಾಯಿಸುವಂತೆ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಗೆಹ್ಲೋಟ್ ಸ್ಪರ್ಧಿಸುವುದಾಗಿ ಘೋಷಿಸಿದಾಗಿನಿಂದ ಅವರು ಸಿಎಂ ಆಗಿ ಮುಂದುವರಿಯುವ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನವು ಪ್ರಮುಖ ಜವಾಬ್ದಾರಿಯಾಗಿದೆ ಎಂದು ಇತ್ತೀಚೆಗೆ ಹೇಳಿದ್ದಾರೆ. ಯಾವುದೇ ನಾಯಕ ಒಂದೇ ಸಮಯದಲ್ಲಿ ಎರಡು ಪ್ರಮುಖ ಸ್ಥಾನಗಳನ್ನು ಹೊಂದಲು ಸಾಧ್ಯವಿಲ್ಲ. ಅಂದಿನಿಂದ, ಗೆಹ್ಲೋಟ್ ಪಕ್ಷದ ಅಧ್ಯಕ್ಷರಾದರೆ, ರಾಜಸ್ಥಾನದ ಹೊಸ ಸಿಎಂ ಯಾರು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿತ್ತು.