ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್ ನಿಂದ ಗೆಹ್ಲೋಟ್ ಹೊರಗಿಡುವಂತೆ ಸಿಡಬ್ಲ್ಯೂಸಿ ಸದಸ್ಯರ ಒತ್ತಾಯ
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಉತ್ತರಾಧಿಕಾರಿ ನೇಮಕ ವಿಚಾರವಾಗಿ ರಾಜಸ್ಥಾನದಲ್ಲಿ ತೀವ್ರ ರಾಜಕೀಯ ಬಿಕ್ಕಟ್ಟು ತಲೆದೋರಿರುವಂತೆಯೇ, ಎಐಸಿಸಿ ಅಧ್ಯಕ್ಷೀಯ ಸ್ಥಾನದ ರೇಸ್ ನಿಂದ ಅಶೋಕ್ ಗೆಹ್ಲೋಟ್ ಅವರನ್ನು ಹೊರಗಿಟ್ಟು, ಮತ್ತೋರ್ವ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.
Published: 26th September 2022 01:59 PM | Last Updated: 26th September 2022 02:10 PM | A+A A-

ಮಲ್ಲಿಕಾರ್ಜುನ ಖರ್ಗೆ, ಗೆಹ್ಲೋಟ್ ಚಿತ್ರ
ನವದೆಹಲಿ: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಉತ್ತರಾಧಿಕಾರಿ ನೇಮಕ ವಿಚಾರವಾಗಿ ರಾಜಸ್ಥಾನದಲ್ಲಿ ತೀವ್ರ ರಾಜಕೀಯ ಬಿಕ್ಕಟ್ಟು ತಲೆದೋರಿರುವಂತೆಯೇ, ಎಐಸಿಸಿ ಅಧ್ಯಕ್ಷೀಯ ಸ್ಥಾನದ ರೇಸ್ ನಿಂದ ಅಶೋಕ್ ಗೆಹ್ಲೋಟ್ ಅವರನ್ನು ಹೊರಗಿಟ್ಟು, ಮತ್ತೋರ್ವ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ಸೋನಿಯಾ ಗಾಂಧಿ ಅವರನ್ನು ಒತ್ತಾಯಿಸಿರುವುದಾಗಿ ಮೂಲಗಳು ಸೋಮವಾರ ತಿಳಿಸಿವೆ.
ರಾಜಸ್ಥಾನದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆ ಮತ್ತು ಗೆಹ್ಲೋಟ್ ಗುಂಪಿನ ಶಾಸಕರ ವರ್ತನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು, ಗೆಹ್ಲೋಟ್ ವಿರುದ್ಧ ಪಕ್ಷದ ಮುಖ್ಯಸ್ಥರಲ್ಲಿ ದೂರು ಸಲ್ಲಿಸಿದ್ದಾರೆ. ಅವರಲ್ಲಿ ನಂಬಿಕೆ ಇಡುವುದು ಮತ್ತು ಪಕ್ಷದ ಹೊಣೆಗಾರಿಕೆ ನೀಡುವುದು ಉತ್ತಮವಲ್ಲ, ಪಕ್ಷದ ಉನ್ನತ ನಾಯಕರು ಗೆಹ್ಲೋಟ್ ಸ್ಪರ್ಧೆಯನ್ನು ಮರು ಪರಿಗಣಿಸಬೇಕು, ಗಾಂಧಿ ಕುಟುಂಬಕ್ಕೆ ನಿಷ್ಠರಾದ ಮತ್ತೋರ್ವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಸದಸ್ಯರು ಸೋನಿಯಾ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ: ದೇಶಾದ್ಯಂತ ಪಕ್ಷದ ಕಾರ್ಯಕರ್ತರಿಂದ ನನಗೆ ಬೆಂಬಲ ಇದೆ ಎಂದ ಶಶಿ ತರೂರು
ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕೆನ್ ಅವರನ್ನು ಭಾನುವಾರ ಜೈಪುರಕ್ಕೆ ಕಳುಹಿಸಲಾಗಿತ್ತು. ಆದರೆ, ಗೆಹ್ಲೋಟ್ ಗುಂಪಿನ ಶಾಸಕರು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿಲ್ಲ. ಈ ಬೆಳವಣಿಗೆಯಿಂದಾಗಿ ದಿಗ್ವಿಜಯ್ ಸಿಂಗ್, ಮುಕುಲ್ ವಾಸ್ನಿಕ್ ಅವರಂತಹ ಇತರ ನಾಯಕರ ಹೆಸರುಗಳು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊರಬರುವ ಸಾಧ್ಯತೆಯಿದೆ. ಈ ಸ್ಥಾನದ ಆಕಾಂಕ್ಷಿಯಾಗಿರುವ ಶಶಿ ತರೂರು ಸೆಪ್ಟೆಂಬರ್ 30 ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಅಶೋಕ್ ಗೆಹ್ಲೋಟ್ ಉತ್ತರಾಧಿಕಾರಿ ಆಯ್ಕೆ ಸಂಬಂಧ ಪಕ್ಷದ ವೀಕ್ಷಕರ ಸಮ್ಮುಖದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಸಚಿನ್ ಪೈಲಟ್ ಮತ್ತು ಅವರ ಗುಂಪಿನ ಶಾಸಕರು ಪಾಲ್ಗೊಂಡರು ಆದರೆ, ಸ್ಪೀಕರ್ ಸಿಪಿ ಜೋಶಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಗೆಹ್ಲೋಟ್ ಬಣದ 90 ಶಾಸಕರು ಕ್ಯಾಬಿನೆಟ್ ಸಚಿವ ಶಾಂತಿ ಧಾರಿವಾಲ್ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಸಚಿನ್ ಪೈಲಟ್ ಕಳೆದ ತಡರಾತ್ರಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ವೀಕ್ಷಕರೊಂದಿಗೆ ಎರಡನೇ ಸುತ್ತಿನ ಸಭೆ ನಡೆಸಿದ್ದಾರೆ.