ಛತ್ತೀಸ್ ಗಢ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ; ಕೇಂದ್ರೀಯ ತನಿಖಾ ಸಂಸ್ಥೆ ಬಳಕೆ: ಭೂಪೇಶ್ ಬಘೇಲ್

ಛತ್ತೀಸ್ ಗಢದಲ್ಲಿ ನಡೆದಿರುವ ಜಾರಿ ನಿರ್ದೇಶನಾಲಯದ ದಾಳಿ ರಾಜಕೀಯ ಪ್ರೇರಿತ ಎಂದು ಸಿಎಂ ಭೂಪೇಶ್ ಬಘೇಲ್ ಆರೋಪಿಸಿದ್ದಾರೆ.
ಭೂಪೇಶ್ ಬಘೇಲ್
ಭೂಪೇಶ್ ಬಘೇಲ್

ರಾಯ್ ಪುರ: ಛತ್ತೀಸ್ ಗಢದಲ್ಲಿ ನಡೆದಿರುವ ಜಾರಿ ನಿರ್ದೇಶನಾಲಯದ ದಾಳಿ ರಾಜಕೀಯ ಪ್ರೇರಿತ ಎಂದು ಸಿಎಂ ಭೂಪೇಶ್ ಬಘೇಲ್ ಆರೋಪಿಸಿದ್ದಾರೆ. 

ಬಿಜೆಪಿಗೆ ತಮ್ಮ ಸರ್ಕಾರವನ್ನು ಬೀಳಿಸಲು ಸಾಧ್ಯವಾಗಲಿಲ್ಲ ಆದ್ದರಿಂದ ಕೇಂದ್ರ ಸರ್ಕಾರದ ಸಂಸ್ಥೆಗಳನ್ನು ಬಳಕೆ ಮಾಡಿಕೊಂಡು ನನ್ನ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ನಡೆಯುತ್ತಿದೆ ಎಂದು ಭೂಪೇಶ್ ಬಘೇಲ್ ಹೇಳಿದ್ದಾರೆ.

ಛತ್ತೀಸ್ ಗಢದಲ್ಲಿ ಹಲವೆಡೆ ದಾಳಿ ನಡೆಸಿದರೂ ಇ.ಡಿ ಈ ವರೆಗೂ ತನ್ನ ಕಾರ್ಯಾಚರಣೆಯಲ್ಲಿ ಏನನ್ನು ವಶಕ್ಕೆ ಪಡೆದಿದೆ ಎಂಬುದರ ಮಾಹಿತಿ ಬಹಿರಂಗಪಡಿಸಿಲ್ಲ ಎಂದು ಬಘೇಲ್ ಆರೋಪಿಸಿದ್ದಾರೆ. 

ಮದ್ಯ ಉದ್ಯಮದಲ್ಲಿ ತೊಡಗಿರುವವರ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದರ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿರುವ ಬಘೇಲ್,  ಕಳೆದ ತಿಂಗಳು ನಡೆದಿರುವ ಜಾರಿ ನಿರ್ದೇಶನಾಲಯದ ಗರಿಷ್ಠ ದಾಳಿಗಳು ಚತ್ತೀಸ್ ಗಢದಲ್ಲೇ ಆಗಿವೆ.

ರಾಯ್ ಪುರದಲ್ಲಿ ಕಾಂಗ್ರೆಸ್ ನ ಸಮಗ್ರ ಅಧಿವೇಶನ ನಡೆದಾಗ ಕೇಂದ್ರೀಯ ಸಂಸ್ಥೆ 50 ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆ ವೇಳೆ ವಶಕ್ಕೆ ಪಡೆಯಲಾದ ಹಣದ ಬಗ್ಗೆ ಈ ವರೆಗೂ ಮಾಹಿತಿಯೇ ನೀಡಿಲ್ಲ. ಉದ್ಯಮಿ ಅಥವಾ ಕೈಗಾರಿಕೋದ್ಯಮಿಗಳಿಂದ ದಾಳಿಯ ವೇಳೆ ಎಷ್ಟು ಹಣ ವಶಕ್ಕೆ ಪಡೆಯಲಾಗಿದೆ ಎಂಬ ಬಗ್ಗೆ ಇ.ಡಿ ಮಾಹಿತಿ ನೀಡಿಲ್ಲ ಎಂದು ಬಘೇಲ್ ಹೇಳಿದ್ದಾರೆ. 

"ನಮ್ಮ ಪಕ್ಷದ ಕಾರ್ಯಕರ್ತರಾದ ಗಿರೀಶ್ ದೇವಾಂಗನ್, ಸನ್ನಿ ಸುಶೀಲ್ ಅಗರ್ವಾಲ್, ವಿನೋದ್ ತಿವಾರಿ ಮತ್ತು ರಾಮಗೋಪಾಲ್ ಅಗರವಾಲ್ ಮೇಲೆ ದಾಳಿ ನಡೆಸಲಾಗಿದೆ, ಆದರೆ ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ಬಹಿರಂಗಪಡಿಸುತ್ತಿಲ್ಲ. ಅಂದರೆ ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ. ಇದು ಅಸ್ಥಿರಗೊಳಿಸುವ ಪ್ರಯತ್ನವಾಗಿದೆ. ಕೇಂದ್ರೀಯ ಏಜೆನ್ಸಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ...'' ಎಂದು ಬಘೇಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com