ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

72 ಮುಸ್ಲಿಮರ ಸಾವಿಗೆ ಕಾರಣವಾದ 1987ರ ಮಲಿಯಾನ ದಂಗೆ ಪ್ರಕರಣದ 40 ಆರೋಪಿಗಳು ಖುಲಾಸೆ

ಸಾಕ್ಷ್ಯಾಧಾರಗಳ ಕೊರತೆ ಉಲ್ಲೇಖಿಸಿ, ಮೀರತ್ ನ್ಯಾಯಾಲಯವು 36 ವರ್ಷ ಹಳೆಯ ಮಲಿಯಾನಾ ಕೋಮು ಘರ್ಷಣೆ ಪ್ರಕರಣದ 40 ಆರೋಪಿಗಳನ್ನು ಖುಲಾಸೆಗೊಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
Published on

ಮೀರತ್: ಸಾಕ್ಷ್ಯಾಧಾರಗಳ ಕೊರತೆ ಉಲ್ಲೇಖಿಸಿ, ಮೀರತ್ ನ್ಯಾಯಾಲಯವು 36 ವರ್ಷ ಹಳೆಯ ಮಲಿಯಾನಾ ಕೋಮು ಘರ್ಷಣೆ ಪ್ರಕರಣದ 40 ಆರೋಪಿಗಳನ್ನು ಖುಲಾಸೆಗೊಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮೇ 23, 1987 ರಂದು ನಡೆದ ಕೋಮು ಗಲಭೆಯಲ್ಲಿ 72 ಮುಸ್ಲಿಮರು ಸಾವನ್ನಪ್ಪಿದ್ದರು ಮತ್ತು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ 93 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಪ್ರಕರಣದ ಸುದೀರ್ಘ ವಿಚಾರಣೆಯ ನಡೆಸಿದ ಮೀರತ್ ಕೋರ್ಟ್, 36 ವರ್ಷಗಳ ನಂತರ 40 ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಮಲಿಯಾನ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಫೀರ್ಯಾದಿ ಸೇರಿದಂತೆ 10 ಮಂದಿ ಕೋರ್ಟ್ ನಲ್ಲಿ ಸಾಕ್ಷ್ಯ ನುಡಿದಿದ್ದಾರೆ. ಆದರೆ ಆರೋಪಿಗಳ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಪ್ರಸ್ತುತಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಹೀಗಾಗಿ 40 ಆರೋಪಿಗಳನ್ನು ಖುಲಾಸೆಗೊಳಿಸಲಾಗುತ್ತಿದೆ ಎಂದು ಕೋರ್ಟ್ ಹೇಳಿದೆ.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಲಖ್ವಿಂದರ್ ಸೂದ್ ಅವರು ಶನಿವಾರ ಎರಡೂ ಕಡೆಯ ವಾದ ಆಲಿಸಿದ ಬಳಿಕ 40 ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.

ಈ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಸಂತ್ರಸ್ತರ ಕುಟುಂಬಸ್ಥರು ತಿಳಿಸಿದ್ದಾರೆ.

ತೀರ್ಪಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ, ಗಲಭೆಯಲ್ಲಿ ತಂದೆಯನ್ನು ಕಳೆದುಕೊಂಡ ಮಹತಾಬ್ ಅವರು, ನನ್ನ ತಂದೆ ಅಶ್ರಫ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಆ ಸಮಯದಲ್ಲಿ ನಾನು ತುಂಬಾ ಚಿಕ್ಕವನಾಗಿದ್ದೆ. ಯಾವುದೇ ಕಾರಣವಿಲ್ಲದೆ ಅವರನ್ನು ಕೊಂದರು" ಎಂದು ಹೇಳಿದ್ದಾರೆ.

"ನ್ಯಾಯಾಲಯದ ನಿರ್ಧಾರವು ನ್ಯಾಯಯುತವಾಗಿಲ್ಲ ಮತ್ತು ಇತರ ಕುಟುಂಬಗಳೊಂದಿಗೆ(ಸಂತ್ರಸ್ತರ) ಮಾತುಕತೆ ನಡೆಸಿದ ನಂತರ ಶೀಘ್ರದಲ್ಲೇ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ" ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com