ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಶಾಶ್ವತ ವಿನಾಯಿತಿ!
ಥಾಣೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪದಾಧಿಕಾರಿಯೊಬ್ಬರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖುದ್ದು ಹಾಜರಾತಿಯಿಂದ ಶಾಶ್ವತ ವಿನಾಯಿತಿ ನೀಡಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ನ್ಯಾಯಾಲಯವೊಂದು ಶನಿವಾರ ಆದೇಶ ಹೊರಡಿಸಿದೆ.
ರಾಹುಲ್ ಗಾಂಧಿ ಪರ ವಕೀಲ ನಾರಾಯಣ ಅಯ್ಯರ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಭೀವಂಡಿ ಪ್ರಥಮ ದರ್ಜೆ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್ ಸಿ ವಾಡಿಕರ್, ಕಾಂಗ್ರೆಸ್ ನಾಯಕ ಶಾಶ್ವತ ವಿನಾಯಿತಿಗೆ ಅರ್ಹರು ಎಂದು ಆದೇಶ ನೀಡಿದರು. ಸ್ಥಳೀಯ ಆರ್‌ಎಸ್‌ಎಸ್ ಕಾರ್ಯಕರ್ತ ರಾಜೇಶ್ ಕುಂಟೆ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಸಾಕ್ಷ್ಯವನ್ನು ದಾಖಲಿಸಲು ಮ್ಯಾಜಿಸ್ಟ್ರೇಟ್ ಜೂನ್ 3 ದಿನಾಂಕವನ್ನು ನಿಗದಿಪಡಿಸಿತು.
ಮಹಾತ್ಮ ಗಾಂಧಿ ಅವರ ಹತ್ಯೆಯಲ್ಲಿ ಆರ್ ಎಸ್ ಎಸ್ ಕೈವಾಡವಿದೆ ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಆರೋಪಿಸಿದ್ದಾರೆ ಎಂದು ರಾಜೇಶ್ ಕುಂಟೆ 2014ರಲ್ಲಿ ಭಿವಂಡಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.
2018 ಜೂನ್ ನಲ್ಲಿ ನ್ಯಾಯಾಲಯದ ಮುಂದೆ ಹಾಜರಾದ ರಾಹುಲ್ ಗಾಂಧಿ ತಾನು ನಿರಾಪರಾಧಿ ಎಂದು ಹೇಳಿದ್ದರು. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ವಿನಾಯಿತಿ ನೀಡಬಾರದು ಎಂದು ಕುಂಟೆ ಇತ್ತೀಚಿಗೆ ಆಗ್ರಹಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ