ನವದೆಹಲಿ: ಶುಕ್ರವಾರ ಸಂಜೆ ಚಂದ್ರ ದರ್ಶನವಾದ ಕಾರಣ ರಂಜಾನ್ ಉಪವಾಸದ ಅಂತ್ಯವನ್ನು ಸೂಚಿಸುವ ಈದ್-ಉಲ್-ಫಿತರ್ ಹಬ್ಬವನ್ನು ನಾಳೆ ದೇಶಾದ್ಯಂತ ಆಚರಿಸಲಾಗುತ್ತದೆ.
ದೇಶದ ಅನೇಕ ಕಡೆಗಳಲ್ಲಿ ಚಂದ್ರ ದರ್ಶನವಾಗಿರುವ ಬಗ್ಗೆ ಮಸೀದಿಯ ರುಯೆಟ್-ಇ-ಹಿಲಾಲ್ ಸಮಿತಿಯು ವಿವಿಧ ಮಸೀದಿಗಳಿಗೆ ಮಾಹಿತಿ ನೀಡಿದ್ದು, ಶನಿವಾರ ದೇಶದಲ್ಲಿ ಈದ್ ಆಚರಿಸಲಾಗುವುದು ಎಂದು ಫತೇಪುರಿ ಮಸೀದಿ ಇಮಾಮ್ ಮುಫ್ತಿ ಮುಕರಮ್ ಅಹ್ಮದ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಭ್ರಾತೃತ್ವ ಮತ್ತು ಸೌಹಾರ್ದತೆಯ ಹಬ್ಬವಾಗಿ ಈದ್- ಉಲ್ -ಫಿತರ್ ಆಚರಿಸಲಾಗುತ್ತಿದೆ ಎಂದು ತಿಳಿಸಿದ ಅಹ್ಮದ್, ದೇಶದಲ್ಲಿ 75 ವರ್ಷಗಳಿಂದ ಇರುವ ಸಹೋದರತೆ ಮತ್ತು ಸೌಹಾರ್ದತೆ ನಿರಂತರವಾಗಿ ಮುಂದುವರಿಯಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇವೆ ಎಂದರು.ಉತ್ತರ ಪ್ರದೇಶದ ಹಲವಾರು ಸ್ಥಳಗಳಲ್ಲಿ ಚಂದ್ರನ ದರ್ಶನವಾಗಿದ್ದು, ನಾಳೆ ಈದ್ ಆಚರಿಸಲಾಗುವುದು ಎಂದು ಲಕ್ನೋದ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ ತಿಳಿಸಿದ್ದಾರೆ.
ಪ್ರಪಂಚದಾದ್ಯಂತ ವಿವಿಧ ದಿನಗಳಲ್ಲಿ ಈದ್-ಉಲ್-ಫಿತರ್ ಆಚರಿಸಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್ ನಲ್ಲಿ ಶವ್ವಾಲ್ ತಿಂಗಳ ಆರಂಭವನ್ನು ಸೂಚಿಸುವ ಚಂದ್ರನ ದರ್ಶನದಿಂದ ಈಧ್ ಉಲ್-ಫಿತರ್ ಆಚರಣೆ ದಿನವನ್ನು ನಿರ್ಧರಿಸಲಾಗುತ್ತದೆ.
Advertisement