ನುಹ್: ಹರ್ಯಾಣದಲ್ಲಿ ಗಲಭೆಗಳನ್ನು ನಿಯಂತ್ರಣಕ್ಕೆ ತರುವುದಕ್ಕಾಗಿ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವ ಮೂಲಕ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಸರ್ಕಾರ ನುಹ್ ನಲ್ಲಿ ಕಲ್ಲು ತೂರಾಟಕ್ಕೆ ಬಳಕೆ ಮಾಡಿಕೊಂಡಿದ್ದ ಹೊಟೆಲ್ ನ್ನು ಇಂದು ನೆಲಸಮಗೊಳಿಸಿದೆ.
ಇತ್ತೀಚಿನ ಗಲಭೆಯಲ್ಲಿ ನುಹ್ ನ ರೆಸ್ಟೋರೆಂಟ್- ಹೋಟೆಲ್ ಒಂದನ್ನು ಕಲ್ಲು ತೂರಾಟ ಮಾಡಲು ಬಳಕೆ ಮಾಡಿಕೊಳ್ಳಲಾಗಿತ್ತು. ಪೊಲೀಸ್ ಸಿಬ್ಬಂದಿಗಳ ತಂಡವೊಂದನ್ನು ತೆರವು ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ಜಿಲ್ಲಾ ಪಟ್ಟಣ ಯೋಜಕ ವಿನೀಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಹಾರ ಫ್ಯಾಮಿಲಿ ರೆಸ್ಟೊರೆಂಟ್ ನ ವಾಣಿಜ್ಯ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು. ಧಾರ್ಮಿಕ ಮೆರವಣಿಗೆ ಮೇಲೆ ಗೂಂಡಾಗಳು ಇದೇ ಕಟ್ಟಡದಿಂದ ಕಲ್ಲು ತೂರಾಟ ನಡೆಸಿದ್ದರು.
ಇಡೀ ಕಟ್ಟಡ ಅನಧಿಕೃತವಾಗಿತ್ತು. ಈ ಕಟ್ಟಡಕ್ಕೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯಿಂದ ನೊಟೀಸ್ ಜಾರಿಗೊಳಿಸಲಾಗಿತ್ತು. ಹೋಟೆಲ್- ರೆಸ್ಟೊರೆಂಟ್ ಸಂಪೂರ್ಣವಾಗಿ ಅನಧಿಕೃತವಾಗಿತ್ತು ಯಾತ್ರೆ ವೇಳೆ ಗೂಂಡಾಗಳು ಇದೇ ಕಟ್ಟಡದಿಂದ ಕಲ್ಲು ತೂರಾಟ ನಡೆಸಿದ್ದರು ಆದ್ದರಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.
ಇದಕ್ಕೂ ಮುನ್ನ ಶನಿವಾರದಂದು ನುಹ್ ಜಿಲ್ಲಾಡಳಿತ 45 ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿತ್ತು. ಜು.31 ರಂದು ಹರ್ಯಾಣದ ನುಹ್ ಜಿಲ್ಲೆಯಲ್ಲಿ ಗಲಭೆ ಭುಗಿಲೆದ್ದಿತ್ತು, ಈ ಗಲಭೆಯಲ್ಲಿ ಇಬ್ಬರು ಹೋಂ ಗಾರ್ಡ್ ಗಳು ಸೇರಿ 6 ಮಂದಿ ಜೀವ ಕಳೆದುಕೊಂಡಿದ್ದರು.
Advertisement