ಪಿನ್ ಕೋಡ್ ಸಂಖ್ಯೆ 193224: ಜಮ್ಮುವಿನ ಎಲ್ ಒಸಿ ಬಳಿ ಇರುವ ಇದು ಭಾರತದ ಮೊಟ್ಟ ಮೊದಲ ಅಂಚೆ ಕಚೇರಿ!
ಶ್ರೀನಗರ: ತೀರಾ ಇತ್ತೀಚಿನವರೆಗೂ ಭಾರತದ ಕೊನೆಯ ಅಂಚೆ ಕಛೇರಿ ಎಂದು ಕರೆಯಲ್ಪಡುತ್ತಿದ್ದ ಜಮ್ಮು ಮತ್ತು ಕಾಶ್ಮೀರದ ಕೆರಾನ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯ (LoC) ಬಳಿ ದೇಶದ ಮೊದಲ ಅಂಚೆ ಕಛೇರಿಯು ಕಿಶನ್‌ಗಂಗಾ ನದಿಯ ದಡದಲ್ಲಿದೆ.
ಪಿನ್ ಕೋಡ್ 193224ನ್ನು ಹೊಂದಿರುವ ಅಂಚೆ ಕಛೇರಿಯನ್ನು ಪೋಸ್ಟ್ ಮಾಸ್ಟರ್ ಮತ್ತು ಮೂವರು ಮೇಲ್ ರನ್ನರ್‌ಗಳು ನಡೆಸುತ್ತಾರೆ. ಇದು ಇತ್ತೀಚಿನವರೆಗೂ ದೇಶದ ಕೊನೆಯ ಅಂಚೆ ಕಚೇರಿ ಎಂದು ಕರೆಯಲ್ಪಡುತ್ತಿತ್ತು. ಈಗ ಅದರ ಸಮೀಪವಿರುವ ಸೈನ್ ಬೋರ್ಡ್ ಇದನ್ನು "ಭಾರತದ ಮೊದಲ ಅಂಚೆ ಕಚೇರಿ" ಎಂದು ಹೇಳುತ್ತದೆ.
ಅಂಚೆ ಕಛೇರಿಯು ಪಾಕ್-ಆಕ್ರಮಿತ-ಕಾಶ್ಮೀರದ (PoK) ಅಂಚಿನಲ್ಲಿದೆ. ಅಲ್ಲಿ ಎಲ್ಒಸಿ ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳನ್ನು ವಿಭಜಿಸುತ್ತದೆ. ಒಂದು ಕಣಿವೆ ನಡುವೆ ಹಾದುಹೋಗುತ್ತಿದ್ದು, ಇದನ್ನು ಎಲ್ಒಸಿಯ ಒಂದು ಬದಿಯಲ್ಲಿ ಕಿಶನ್ ಗಂಗಾ ನದಿ ಮತ್ತು ಇನ್ನೊಂದು ಬದಿಯಲ್ಲಿ ನೀಲಂ ನದಿ ಎಂದು ಕರೆಯಲಾಗುತ್ತದೆ. ನದಿಯ ಭಾರತೀಯ ದಂಡೆಯಲ್ಲಿ ಅಂಚೆ ಕಛೇರಿ ಇದೆ.
ಕಳೆದ ಎರಡು ವರ್ಷಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ಸೈನಿಕರ ನಡುವಿನ ಗಡಿ ಕದನ ವಿರಾಮಕ್ಕೆ ಯಾವುದೇ ಅಡೆತಡೆಯಿಲ್ಲದ ಕಾರಣ, ಪೋಸ್ಟ್‌ಮಾಸ್ಟರ್ ಶಾಕಿರ್ ಭಟ್ ಮತ್ತು ಮೂವರು ಮೇಲ್ ರನ್ನರ್‌ಗಳು ಗಡಿ ಗುಂಡಿನ ಕಾಳಗ ಅಥವಾ ಶೆಲ್ ದಾಳಿಯಲ್ಲಿ ಸಿಕ್ಕಿಬೀಳುವ ಭಯವಿಲ್ಲದೆ ಅಂಚೆ ಕಚೇರಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಕೆಲವು ವರ್ಷಗಳ ಹಿಂದಿನವರೆಗೂ ಗಡಿಯಾಚೆಗಿನ ಬಂದೂಕು, ಗುಂಡಿನ ಸುರಿಮಳೆಗೆ ಹೆದರಿ ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾದ ಸೈನ್ಯಕ್ಕೆ ಮತ್ತು ಸ್ಥಳೀಯ ಜನರಿಗೆ ಅಂಚೆಗಳನ್ನು ತಲುಪಿಸಲು ಪೋಸ್ಟ್ ಮಾಸ್ಟರ್ ಗಳು, ಪೇದೆಯಣ್ಣರು ಭಯಪಡುತ್ತಿದ್ದರು.
ಇದು ಐತಿಹಾಸಿಕ ಅಂಚೆ ಕಛೇರಿಯಾಗಿದ್ದು, 1947 ರಲ್ಲಿ ಎರಡು ದೇಶಗಳು ದ್ವೇಷದಿಂದ ಇಬ್ಭಾಗವಾಗುವ ಮೊದಲಿನಿಂದಲೂ ಕಾರ್ಯನಿರ್ವಹಿಸುತ್ತಿದೆ. 1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ಪಡೆಗಳ ನಡುವಿನ ಹಗೆತನವು ಉತ್ತುಂಗಕ್ಕೇರಿದಾಗಲೂ, 1971 ಮತ್ತು 1998 ಕಾರ್ಗಿಲ್ ಯುದ್ಧಗಳು ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಯ ರಾಜ್ಯಗಳ ನಡುವೆ ನಡೆದಾಗಲೂ ಅಂಚೆ ಕಚೇರಿಯು ಜನರು ಮತ್ತು ಸೈನಿಕರಿಗೆ ತನ್ನ ಸೇವೆ ನೀಡುವುದರಿಂದ ಹಿಂದೆಬೀಳಲಿಲ್ಲ.
1993ರಲ್ಲಿ ಪ್ರವಾಹದಲ್ಲಿ ಅಂಚೆ ಕಛೇರಿ ಕೊಚ್ಚಿ ಹೋದಾಗಿನಿಂದ ಪೋಸ್ಟ್ ಮಾಸ್ಟರ್ ಶಾಕಿರ್ ಅವರ ಮನೆಯಿಂದ ಅಂಚೆ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯ ತುಫೈಲ್ ಅಹ್ಮದ್ ಭಟ್, ಅಂಚೆ ಕಛೇರಿಯು ಎಲ್‌ಒಸಿಯಲ್ಲಿ ನಿಯೋಜಿಸಲಾದ ಸೇನಾ ಸಿಬ್ಬಂದಿಗೆ ಅಂಚೆ ಮತ್ತು ಸ್ಪೀಡ್ ಪೋಸ್ಟ್‌ಗಳನ್ನು ಹೆಚ್ಚಾಗಿ ಸ್ವೀಕರಿಸುತ್ತದೆ ಎಂದು ಹೇಳಿದರು.
ಸ್ಪೀಡ್ ಪೋಸ್ಟ್‌ಗಳು ಕೇರನ್ ಅಂಚೆ ಕಚೇರಿಯನ್ನು ತಲುಪಲು ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ, ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿಯಲ್ಲಿ ಸುಧಾರಣೆ ಮತ್ತು ನಿಯಂತ್ರಣ ರೇಖೆಯಲ್ಲಿ ಭಾರತ-ಪಾಕಿಸ್ತಾನದ ಯುದ್ಧವನ್ನು ನಿಲ್ಲಿಸಿದ ನಂತರ, ಅಧಿಕಾರಿಗಳು ಕೆರಾನ್, ಕರ್ನಾ, ಉರಿ, ಗುರೆಜ್, ಇತ್ಯಾದಿ ಸೇರಿದಂತೆ ಹಲವು ಗಡಿ ಪ್ರದೇಶಗಳನ್ನು ಸಂದರ್ಶಕರಿಗೆ ತೆರೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ